ಚಾಮರಾಜನಗರ: ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದ ಚಾಮರಾಜನಗರ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ವರ್ಗಾವಣೆ ಮಾಡುವ ಮೂಲಕ ಕೆಲವು ಜನಪ್ರತಿನಿಧಿಗಳು ಮೇಲುಗೈ ಸಾಧಿಸಿದ್ದರೆ, ಸಾಮಾನ್ಯ ಜನ ಮಾತ್ರ ಜನಪ್ರತಿನಿಧಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
ಸಾಮಾನ್ಯ ಜನರೊಂದಿಗೆ ಬೆರೆತು ಕಾರ್ಯ ನಿರ್ವಹಿಸುತ್ತಿದ್ದ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರು ಚಾಮರಾಜನಗರದ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸಿದ್ದರು. ಎಲ್ಲವನ್ನು ಖುದ್ದಾಗಿ ತಾವೇ ನಿಂತು ಮಾಡಿಸುತ್ತಿದ್ದರು. ಹೀಗಾಗಿ ಕೆಲವು ಜನಪ್ರತಿನಿಧಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಹೀಗಾಗಿಯೇ ಪಕ್ಷಾತೀತವಾಗಿ ಸಹಿ ಚಳುವಳಿ ನಡೆಸಿ ಕೊನೆಗೂ ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಮನೆಗೆ ತೆರಳಿ ಶೌಚಾಲಯ ನಿರ್ಮಿಸುವಂತೆ ಜನರಲ್ಲಿ ಅರಿವು ಮೂಡಿಸಿದ್ದಲ್ಲದೆ, ಕಾಮಗಾರಿ ನಡೆಯುತ್ತಿದ್ದ ವೇಳೆ ತಾವೇ ತಲೆ ಮೇಲೆ ಮಣ್ಣು ಹೊತ್ತು ಕೆಲಸಗಾರರಲ್ಲಿ ಹುರುಪು ತುಂಬಿದ್ದರು. ಯಾರ ಮುಲಾಜಿಗೂ ಒಳಗಾಗದೇ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಿಷ್ಠುರ ಹಾಗೂ ಪ್ರಾಮಾಣಿಕವಾಗಿ ನಡೆದುಕೊಂಡದ್ದು ಭ್ರಷ್ಟ ಹಾಗೂ ಬೇಜವಾಬ್ದಾರಿ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿತ್ತು. ಅದರಲ್ಲೂ ನರೇಗಾ ಯೋಜನೆಯ ಭ್ರಷ್ಟ (ಗುಳುಂ) ಸ್ವಯಂ ಗುತ್ತಿಗೆದಾರರ ಪಾಲಿಗೆ ದುಸ್ವ್ವಪ್ನವಾಗಿದ್ದರು.
ಹೆಬ್ಸಿಬಾ ರಾಣಿ ಕೊರ್ಲಪಾಟಿಯವರು ತಮ್ಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡು ಅಧಿಕಾರ ವಹಿಸಿಕೊಂಡ ದಿನದಿಂದಲೂ ತಮ್ಮ ಕಾರ್ಯಕ್ಷಮತೆಯಿಂದ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡುತ್ತಾ ಸ್ಮಾರ್ಟ್ ಯೋಜನೆಯನ್ನು ಜಾರಿಗೆ ತಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಗೂ ಆಗಾಗ್ಗೆ ಅಧಿಕಾರಿಗಳ ಸಭೆಗಳನ್ನು ನಡೆಸಿ ಗ್ರಾಮ ಪಂಚಾಯಿತಿಗಳಲ್ಲಿ ಜನರ ಕೆಲಸ ಕಾರ್ಯಗಳನ್ನು ಹೇಗೆ ಮಾಡಬೇಕೆಂದು ಅಧಿಕಾರಿಗಳಿಗೆ ಹೇಳಿಕೊಡುತ್ತಿದ್ದರು.
ಶೌಚಲಾಯ ನಿರ್ಮಾಣಕ್ಕೆ, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿ, ದಿವ್ಯಾಂಗರಿಗೆ ಸಾಧನ ಸಲಕರಣೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನ, ಉಷಾ ಕಾರ್ಯಕ್ರಮದಂತ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅದರಲ್ಲೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹಾಗೂ ಪ್ರೀತಿಯನ್ನು ಇಟ್ಟುಕೊಂಡಿದ್ದ ಮಾನವೀಯ ಮನಸ್ಸನ್ನು ಹೊಂದಿದ್ದರು.
ತಾವು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ, ಪಾರದರ್ಶಕವಾಗಿ, ಎಲ್ಲರಿಗೂ ತಲುಪಬೇಕೆನ್ನುವುದು ಅವರ ಆಶಯವಾಗಿತ್ತು. ಅಂತಹ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾದ ಜನಪ್ರತಿನಿಧಿಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕೋ? ಅಥವಾ ಇಂಥ ಜನಪ್ರತಿನಿಧಿಗಳನ್ನು ಮತ ಹಾಕಿ ಆಯ್ಕೆ ಮಾಡಿದಕ್ಕೆ ಮರುಗಬೇಕೋ ಎಂಬುದು ಗೊತ್ತಾಗದೆ ಜನ ಕಂಗಾಲಾಗಿದ್ದಾರೆ.
ಹೆಬ್ಸಿಬಾ ರಾಣಿ ಕೊರ್ಲಪಾಟಿ ಬೆಂಗಳೂರಿನ ಐಟಿಬಿಟಿ ನಿರ್ದೇಶಕಿಯಾಗಿ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಕೆ.ಹರೀಶ್ ಕುಮಾರ್ ಎಂಬುವರು ನೇಮಕವಾಗಿದ್ದಾರೆ. ಹೆಬ್ಸಿಬಾರಾಣಿಯವರ ಆರಂಭಿಸಿರುವ ಕಾರ್ಯಕ್ರಮಗಳನ್ನು ಮುಂದುವರೆಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.