ಚಾಮರಾಜನಗರ: ತನ್ನ ಪಾಡಿಗೆ ಹರಿದು ಹೋಗುತ್ತಿದ್ದ ನಾಗರಹಾವೊಂದು ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ಅವರ ಚಿತ್ರದ ಬಳಿ ಹೆಡೆಯೆತ್ತಿ ನಿಂತು ಕೆಲಕಾಲ ಎಲ್ಲರನ್ನು ಅಚ್ಚರಿಗೆ ತಳ್ಳಿರುವುದು ಇದೀಗ ಸುದ್ದಿಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ದಿ. ಎಚ್.ಎಸ್.ಮಹದೇವಪ್ರಸಾದ್ ಅವರ ಮಹಾಸ್ಮರಣೆಯ ಅಂಗವಾಗಿ ತೋಟದ ಪ್ರವೇಶದ ಬಳಿಯಲ್ಲಿ ಅವರ ಭಾವಚಿತ್ರವನ್ನೊಳಗೊಂಡ ಬ್ಯಾನರ್ ಅಳವಡಿಸಲಾಗಿತ್ತು ಇದರ ಬಳಿ ಬಂದ ನಾಗರಹಾವೊಂದು ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ಇದ್ದು ಹೆಡೆಯೆತ್ತಿ ತಲೆಯಾಡಿಸುತ್ತಿತ್ತು. ಇದನ್ನು ನೋಡಿದ ಜನ ಅದನ್ನು ಅಲ್ಲಿಂದ ಓಡಿಸಲು ಮಾಡಿದ ಪ್ರಯತ್ನ ಫಲ ಕೊಡಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಕೆಲವರು ಸ್ಥಳಕ್ಕೆ ಆಗಮಿಸಿ ಅಚ್ಚರಿಯಿಂದ ನೋಡತೊಡಗಿದರು, ಮತ್ತೆ ಕೆಲವರು ಏನೇನೋ ತಮಗೆ ತೋಚಿದಂತೆ ಕಥೆ ಕಟ್ಟತೊಡಗಿದರು.
ಮಹಾಸ್ಮರಣೆಯ ಸಿದ್ಧತೆಯ ಉಸ್ತುವಾರಿ ಹೊತ್ತಿದ್ದ ಮಹದೇವಪ್ರಸಾದ್ ಅವರ ಸಹೋದರ ನಂಜುಂಡಪ್ರಸಾದ್ ಅವರಿಗೆ ಈ ವಿಷಯ ಗೊತ್ತಾಗಿ ಅವರು ಸ್ಥಳಕ್ಕೆ ಬಂದಿದ್ದಾರೆ. ಪ್ರವೇಶ ದ್ವಾರದಲ್ಲೇ ಹಾವು ಇದ್ದುದನ್ನು ಕಂಡು ಅಚ್ಚರಿಗೊಂಡರಲ್ಲದೆ, ಅದು ಅಲ್ಲಿಂದ ಕದಲದೆ ಇರುವುದನ್ನು ಕಂಡು ಬೇರೆ ಮಾರ್ಗವಿಲ್ಲದೆ ಗುಂಡ್ಲುಪೇಟೆಯಿಂದ ಹಾವು ಹಿಡಿಯುವರನ್ನು ಕರೆಯಿಸಿ ಸೆರೆ ಹಿಡಿದು ಬೇರೆಡೆಗೆ ಬಿಡಲಾಯಿತು.