ಮಡಿಕೇರಿ: ದಿಡ್ಡಳ್ಳಿ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಜನತೆಗೆ ಆರಂಭದಲ್ಲಿ ಅಲ್ಲಿ ನೆಲೆಯೂರಲು ಅವಕಾಶ ನೀಡುವ ಮೂಲಕ ಸರಕಾರ ತಪ್ಪು ಮಾಡಿದ್ದು, ಸರಕಾರವೇ ತನ್ನ ತಪ್ಪನ್ನು ಸರಿ ಮಾಡಬೇಕೆಂದು ಶಾಸಕ ಕೆ.ಜಿ.ಬೋಪಯ್ಯ ಒತ್ತಾಯಿಸಿದ್ದಾರೆ. ಹೋರಾಟದ ಆರಂಭದ ದಿನಗಳಲ್ಲಿ ಅದೇ ಪ್ರದೇಶದಲ್ಲಿ ನಿವೇಶನ ಹಂಚುವುದಾಗಿ ಭರವಸೆ ನೀಡಿ ಇದೀಗ ನಿವೇಶನ ನೀಡಲು ಸಾಧ್ಯವಿಲ್ಲವೆಂದು ಸರಕಾರ ಗೊಂದಲ ಸೃಷ್ಟಿಸಿದೆ ಎಂದು ಟೀಕಿಸಿದರು.
ಮೀಸಲು ಅರಣ್ಯ ಪ್ರದೇಶದಲ್ಲಿ ನಿವೇಶನ ನೀಡಿದರೆ ಜೈಲು ಸೇರಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ. ನಿವೇಶನ ರಹಿತರು ಈ ಪ್ರದೇಶದಲ್ಲಿ ಬಂದು ನೆಲೆಯೂರುವವರೆಗೂ ಸುಮ್ಮನಿದ್ದ ಸರಕಾರ ಮತ್ತು ಸಚಿವರು ಈಗ ಯಾಕೆ ಜೈಲು ವಾಸದ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಆರಂಭದಲ್ಲಿ ಈ ಹಿಂದೆ ಇದ್ದ ಪ್ರದೇಶದಲ್ಲೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ತಮ್ಮ ನಿಲುವನ್ನು ಬದಲಿಸಿ ಬಡವರನ್ನು ಗೊಂದಲದಲ್ಲಿ ಸಿಲುಕಿಸಿದ್ದಾರೆ. ವಿವಾದಿತ ಪ್ರದೇಶ ಅರಣ್ಯ ಪೈಸಾರಿ ಎಂದು ನಮೂದಾಗಿದ್ದರೆ ಸರ್ಕಾರ ಅದನ್ನು ವಾಪಾಸ್ ಪಡೆದು ಕಾನೂನಿನ ಚೌಕಟ್ಟಿನಡಿ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಿ ಎಂದರು. ಅಧಿಕಾರಶಾಹಿ ಆಡಳಿತ ನಡೆಯುತ್ತಿರುವುದರಿಂದ ಈ ರೀತಿಯ ಗೊಂದಲಗಳು ಸೃಷ್ಟಿಯಾಗುತ್ತಿವೆ ಎಂದು ಕೆ.ಜಿೆ.ಬೋಪಯ್ಯ ಅಭಿಪ್ರಾಯ ಪಟ್ಟರು.
ಕ್ರೀಡಾಂಗಣವನ್ನು ಒಪ್ಪಿಕೊಳ್ಳಿ:
ಪಾಲೆೇಮಾಡು ಪೈಸಾರಿಯಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದ ಬೋಪಯ್ಯ, ಕ್ರಿಕೆಟ್ ಕ್ರೀಡಾಂಗಣವನ್ನು ಸ್ಥಳೀಯರು ಸ್ವಾಗತಿಸುವ ಅಗತ್ಯವಿದೆ ಎಂದರು. ಈಗಾಗಲೆ ಬೇರೆ ಪ್ರದೇಶದಲ್ಲಿ 4 ಏಕರೆ ಭೂಮಿಯನ್ನು ಸ್ಮಶಾನಕ್ಕಾಗಿ ನೀಡಲಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಸ್ಮಶಾನವನ್ನು ಸ್ಥಳಾಂತರಿಸಬಾರದೆನ್ನುವ ನಿಯಮವೇನೂ ಇಲ್ಲ. ಆದ್ದರಿಂದ ಕ್ರೀಡಾಂಗಣಕ್ಕೆ ವಿರೋಧ ವ್ಯಕ್ತಪಡಿಸದೆ ಕ್ರ್ರೀಡಾಂಗಣವನ್ನು ಸದುಪಯೋಗಪಡಿಸಿಕೊಳ್ಳಲು ಸ್ಥಳೀಯ ನಿವಾಸಿಗಳು ಮುಂದಾಗಬೇಕೆಂದು ಮನವಿ ಮಾಡಿದರು. ಈ ಕ್ರೀಡಾಂಗಣ ಮುಂದಿನ ಪೀಳಿಯ ಕ್ರೀಡಾ ಕ್ಷೇತ್ರದ ಸಾಧನೆಗೆ ಹೆಚ್ಚು ಸಹಕಾರಿಯಾಗಿದೆ ಎಂದರು.
ಇಡೀ ಕೊಡಗು ಜಿಲ್ಲೆಯನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಬೇಕೆನ್ನುವ ವೈಲ್ಡ್ ಲೈಫ್ ಸೊಸೈಟಿಯ ಹೇಳಿಕೆಯನ್ನು ಬೋಪಯ್ಯ ಇದೇ ಸಂದರ್ಭ ಖಂಡಿಸಿದರು. ಎಲ್ಲಿ ಅರಣ್ಯ ಪ್ರದೇಶಕ್ಕೆ ತೊಂದರೆಯಾಗುತ್ತಿದೆಯೋ ಅಲ್ಲಿ ಪರಿಸರ ವಾದಿಗಳು ಹೋರಾಟ ನಡೆಸಬೇಕು. ಈಗಾಗಲೆ ಅರಣ್ಯ ಇಲಾಖೆೆಯ ಕಿರುಕುಳದಿಂದ ಜಿಲ್ಲೆಯ ಜನತೆ ಸಾಕಷ್ಟು ಬೇಸತ್ತಿದ್ದು, ಮತ್ತೆ ಸೂಕ್ಷ್ಮ ಪರಿಸರ ವಲಯ ಘೋಷಣೆಯಾದರೆ ಮತ್ತಷ್ಟು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.