ಚಾಮರಾಜನಗರ: ಕಾರ್ಖಾನೆಯಲ್ಲಿ ಎಲೆಕ್ಟ್ರಿಕ್ ವಿಭಾಗದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಅಗ್ನಿ ಅವಘಡ ಸಂಭವಿಸಿ ದೇಹದ ಅರ್ಧ ಭಾಗ ಸುಟ್ಟು ಹೋಗಿದ್ದರೂ ಕಾರ್ಖಾನೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದರಿಂದ ಸೂಕ್ತ ಚಿಕಿತ್ಸೆ ಇಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಪರದಾಡುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಅಟ್ಟುಗುಳಿಪುರದ ಗಣೇಶ ಕಾಲೋನಿಯ ನಿವಾಸಿ ಪಿ. ವೆಂಕಟಚಲಂ(55) ಸುಟ್ಟು ಗಾಯಗಳಿಂದ ನರಳುತ್ತಿರುವ ಕಾಮರ್ಮಿಕ. ಈತ ಮೂಲತಃ ತಮಿಳುನಾಡಿನವರಾಗಿದ್ದು, ಇಲ್ಲಿನ ಅಂಕನಶೆಟ್ಟಿನಪುರ ಬಳಿಯ ವೆಲ್ಲನ್ ಟೆಕ್ಸ್ಟೈಲ್ನಲ್ಲಿ ಕಳೆದ 30 ವರ್ಷಗಳಿಂದ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಅವಘಡದಿಂದಾಗಿ ಕಳೆದ 45 ದಿನಗಳಿಂದ ಅಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಘಟನೆ ನಡೆದಾಗ ಪೊಲೀಸ್ ಠಾಣೆಗೂ ದೂರು ನೀಡದೆ, ಕಾರ್ಖಾನೆಯವರು ಎಲ್ಲ ಖರ್ಚು ವೆಚ್ಚವನ್ನು ಭರಿಸುವುದಾಗಿ ನಂಬಿಸಿ, ಖಾಸಗಿ ಅಸ್ಪತ್ರೆಗೆ ಸೇರಿಸಿ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಆತನ ಮಗ ಶ್ರೀನಿವಾಸ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಪೋಷಕರ ಒತ್ತಡಕ್ಕೆ ಮಣಿದು ಕೊನೆ ಗಳಿಗೆಯಲ್ಲಿ ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೆಲ್ಲನ್ ಟೆಕ್ಸ್ಟೈಲ್ ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ ಪಿ. ವೆಂಕಟಚಲಂ ಡಿ. 30 ರಂದು ಎಂದಿನಂತೆ ಎಲೆಕ್ಟ್ರಿಕ್ ಘಟಕದಲ್ಲಿ ಸ್ವಿಚ್ ಹಾಕಲು ಮುಂದಾಗ ಎಲೆಕ್ಟ್ರಿಕ್ ಪೈರಿಂಗ್ ಆಗಿ ಇಡೀ ದೇಹದ ಮುಂಭಾಗ ಹಾಗೂ ಕೈ ಸುಟ್ಟು ಹೋಗಿದೆ. ತೀವ್ರ ನಿತ್ರಾಣದಲ್ಲಿದ್ದ ಆತನನ್ನು ಕ್ಷೇಮ ಆಸ್ಪತ್ರೆಗೆ ದಾಖಲು ಮಾಡಿ, ಕಳೆದ 45 ದಿನಗಳಿಂದ ಪ್ರಾಥಮಿಕ ಚಿಕಿತ್ಸೆಯನ್ನು ಮಾತ್ರ ನೀಡಲಾಗುತ್ತಿದೆ. ಹೀಗಾಗಿ ಕಾರ್ಮಿಕ ಚೇತರಿಸಿಕೊಂಡು ಮತ್ತೆ ದುಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.