ಗೋಣಿಕೊಪ್ಪಲು: ಮತ್ತಿಗೋಡು ಆನೆ ಶಿಬಿರದ ತುಂಬಾ ಓಡಾಡಿಕೊಂಡಿದ್ದ ತುಂಗಾ, ಕರ್ಣ, ಭೀಷ್ಮ ಉತ್ತರಾಖಂಡ ಪ್ರವಾಸ ಹೊರಟಿದೆ. ಪ್ರವಾಸಿಗರ ಮನ ತಣಿಸುತ್ತಿದ್ದ ತಿತಿಮತಿ ಮತ್ತಿಗೋಡು ಸಾಕಾನೆ ಶಿಬಿರದಿಂದ ಉತ್ತರಖಾಂಡ್ ಗೆ 4 ಆನೆಗಳು ಪ್ರಯಾಣ ಬೆಳೆಸಿವೆ.
ತುಂಗ (15) ಇದರ ಮಗ 2.3 ವರ್ಷ, ಕರ್ಣ (7), ಭೀಷ್ಮ (7) ಸೋಮವಾರ ಸಂಜೆ ಪ್ರಯಾಣ ಬೆಳೆಸಿದವು. ಇವುಗಳನ್ನು ಲಾರಿಯಲ್ಲಿ ಹತ್ತಿಸಿ ಸಂಜೆ 4 ಗಂಟೆಗೆ ಬೀಳ್ಕೊಡಲಾಯಿತು. ಈ ಆನೆಗಳು ಇಂದು ಸಂಜೆ ಹುಣಸೂರಿನ ಕಲ್ಲಬೆಟ್ಟ ಅರಣ್ಯದಲ್ಲಿ ತಂಗಲಿದ್ದು ಮುಂದೆ ಮತ್ತೆ ಪ್ರಯಾಣ ಬೆಳಸಲಿವೆ. ಈ ಆನೆಗಳ ಜತೆಯಲ್ಲಿ ಮಾವುತರಾದ ಗೋಪಾಲ್,ರಾಮ,ಲಿಂಗಪ್ಪ ತೆರಳಿದ್ದಾರೆ. ಉತ್ತರಾಖಾಂಡ ರಾಜ್ಯದ ಕಾರ್ಬೆಟ್ ಟೈಗರ್ ಸಂರಕ್ಷಿತ ಪ್ರದೇಶಕ್ಕೆ ಇವುಗಳನ್ನು ಕಳಿಸಿಕೊಡಲಾಗಿದೆ. ಸರಕಾರ ನಡುವೆ ನಡೆದ ಮಾತುಕತೆಯಂತೆ ಉತ್ತರಾಖಾಂಡ ರಾಜ್ಯದ ಅರಣ್ಯಾಧಿಕಾರಿಗಳು ಈ ಆನೆಗಳನ್ನು ಪಡೆದುಕೊಂಡಿದ್ದಾರೆ.ಉತ್ತರಾಖಾಂಡ್ ಗೆ ಲಾರಿಯಲ್ಲಿಯೇ ತೆರಳಲಿವೆ. ಮಾರ್ಗದ ಮಧ್ಯದಲ್ಲಿ ಅಲ್ಲಲ್ಲಿಯೇ ತಂಗಿ ವಿಶ್ರಾಂತಿ ಪಡೆದು ಪ್ರಯಾಣ ಬೆಳೆಸಲಿವೆ. ಈ ಆನೆಗಳು ಉತ್ತರಾಕಾಂಡದ ಮಾವುತರಿಗೆ ಒಗ್ಗಿಕೊಳ್ಳುವವರೆಗೆ ಮಾವುತರಾದ ರಾಮ, ಗೋಪಾಲ್, ಲಿಂಗಪ್ಪ ಅಲ್ಲಿಯೇ ಇರಲಿದ್ದಾರೆ. ಬಳಿಕ ಹಿಂದಿರುಗಲಿದ್ದಾರೆ ಎಂದು ಮತ್ತಿಗೋಡು ಶಿಬಿರದ ಅರಣ್ಯಾಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ. ಉತ್ತರಾಕಾಂಡ್ ರಾಜ್ಯದ ಪಿಸಿಸಿಎಫ್ ಸೇರಿದಂತೆ ಹಲವು ಹಿರಿಯ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಮಡುಗಟ್ಟಿದ ನೋವು : ಆನೆಗಳನ್ನು ಕಳುಹಿಸಿ ಕೊಡುವಾಗ ಶಿಬಿರದ ಮಾವುತರು ಮತ್ತು ಅರಣ್ಯ ಸಿಬ್ಬಂದಿಗಳಲ್ಲಿ ನೋವು ಮಡುಗಟ್ಟಿತ್ತು. ಈ ನಾಲ್ಕು ಆನೆಗಳನ್ನು ಮಾವುತರು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದರು. ಕರ್ಣ, ಭೀಷ್ಮ ಮತ್ತು ತುಂಗಳ ಮರಿಯಾನೆ ಶಿಬಿರದಲ್ಲೆಲ್ಲ ಓಡಾಡಿಕೊಂಡು ಮಾವುತರ ಕುಟುಂಬಕ್ಕೆ ಆನಂದ ನೀಡುತ್ತಿದ್ದವು. ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು. ಇಂತಹ ಆನೆಗಳು ಸಾವಿರಾರು ಕಿಮೀ ದೂರದ ಪ್ರದೇಶಕ್ಕೆ ತೆರಳುತ್ತಿವೆ. ಇನ್ನೂ ಇವುಗಳ ಓಡಾಟ ಬರಿ ನೆನಪು ಮಾತ್ರ ಎಂದು ಶಿಬಿರದ ಮಾವುತರಾದ ವಸಂತ, ತಿಮ್ಮ, ವಿಶ್ವನಾಥ್,ಶಾರದಾ ತಮ್ಮ ನೋವು ತೋಡಿಕೊಂಡರು.