ಮಂಡ್ಯ: ಚಾಮರಾಜನಗರದ ಬಂಡೀಪುರ ಅರಣ್ಯಕ್ಕೆ ಬೆಂಕಿ ಬಿದ್ದು ಓರ್ವ ಸಾವನ್ನಪ್ಪಿ ಮೂವರು ಗಾಯಗೊಂಡ ಘಟನೆ ಹಸಿರಿರುವಾಗಲೇ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕೊಮ್ಮೇನಹಳ್ಳಿ ಬಳಿಯ ಬೆಳ್ಳಿಬೆಟ್ಟಕ್ಕೆ ಬೆಂಕಿ ತಗುಲಿದ್ದು ಹೊತ್ತಿ ಉರಿದಿದೆ. ಇದರಿಂದಾಗಿ ಸುಮಾರು ಐದಾರು ಎಕರೆ ಅರಣ್ಯ ನಾಶವಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಕೊಮ್ಮೇನಹಳ್ಳಿ ಬಳಿಯಿರುವ ಬೆಳ್ಳಿಬೆಟ್ಟವು ಅರಣ್ಯವನ್ನು ಹೊಂದಿದ್ದು, ಇಲ್ಲಿನ ಕುರುಚಲು ಗಿಡಗಳು ಸೇರಿದಂತೆ ಹುಲ್ಲು ಒಣಗಿ ನಿಂತಿತ್ತು. ಈ ಪ್ರದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ನಿಕ್ಷೇಪ ಇರುವ ಬಗ್ಗೆ ರಾಷ್ಟ್ರೀಯ ಭೂಗರ್ಭ ಇಲಾಖೆಯು ಸಂಶೋಧನೆ ನಡೆಸಿತ್ತಲ್ಲದೆ, ಸಂರಕ್ಷಣೆಗೂ ಮುಂದಾಗಿ ಅರಣ್ಯವನ್ನು ಬೆಳೆಸಿತ್ತು. ಸೊಂಪಾಗಿ ಬೆಳೆದಿದ್ದ ಅರಣ್ಯವನ್ನು ಇದುವರೆಗೆ ಕಾಪಾಡಿಕೊಂಡು ಬರಲಾಗಿತ್ತಾದರೂ ಈ ಬಾರಿ ಮಳೆಯಿಲ್ಲದ ಕಾರಣ ಕುರುಚಲು ಗಿಡಗಳು, ಹುಲ್ಲು ಒಣಗಿ ನಿಂತಿತ್ತು.
ಆದರೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಅರಣ್ಯ ದಿಢೀರ್ ಹೊತ್ತಿ ಉರಿದಿದೆ. ಪರಿಣಾಮ ಸುಮಾರು ಐದಾರು ಎಕರೆ ಪ್ರದೇಶದಲ್ಲಿದ್ದ ಅರಣ್ಯ ಸಂಪತ್ತು ನಾಶವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಬೇಸಿಗೆ ಆರಂಭದಲ್ಲೇ ಒಂದರ ಮೇಲೊಂದರಂತೆ ಅರಣ್ಯಕ್ಕೆ ಬೆಂಕಿ ತಗಲುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಬೆಳ್ಳಿಬೆಟ್ಟದಲ್ಲಿ ಬೆಂಕಿ ಅನಾಹುತದಿಂದ ಅರಣ್ಯ ಸಂಪತ್ತು ನಾಶವಾಗಿದೆಯಲ್ಲದೆ, ಪ್ರಾಣಿ ಪಕ್ಷಿಗಳು ಸಾವನ್ನಪ್ಪಿವೆ. ಇದು ಹೀಗೆ ಮುಂದುವರೆದರೆ ಇನ್ನಷ್ಟು ದುರಂತಗಳು ನಡೆಯುವ ಆತಂಕ ಜನರಲ್ಲಿ ಮನೆ ಮಾಡಿದೆ.