ಮೂಡಿಗೆರೆ: ಬಣಕಲ್ ನಲ್ಲಿ ಎರಡು ದಿನ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಿಗೆ ಪುಕ್ಕಟೆ ವಿತರಣೆಗೆ ತಂದಿದ್ದ ಕೈಚೀಲದ ತುಂಬಾ ಆಂಗ್ಲ ಅಕ್ಷರಗಳು ತುಂಬಿದ್ದು, ಸಾಹಿತ್ಯಾಸಕ್ತರ ಅಸಮಾಧಾನಗಳಿಗೆ ಕಾರಣವಾಯಿತು. ಕೈ ಚೀಲ ವಿತರಣೆ ವೇಳೆ ‘ಕೈಚೀಲ ತಮಗೆ ಬೇಡ. ಆಂಗ್ಲ ಲಿಪಿಯ ಅಕ್ಷರವುಳ್ಳ ಚೀಲವನ್ನು ಸಾಹಿತ್ಯ ಸಮ್ಮೇಳನಕ್ಕೆ ತಂದಿರುವ ಸಂಘಟಕರು ಕನ್ನಡ ಭಾಷೆಗೆ ಅಪಮಾನ ಎಸಗುತ್ತಿರುವಿರಿ ಎಂದು ಕೈ ಚೀಲವನ್ನು ಪಡೆಯದೆ ಸಾಹಿತ್ಯ ಪ್ರೇಮಿಗಳು ಹಿಂದಿರುಗಿಸುತ್ತಿದ್ದರು.
ಮೂಡಿಗೆರೆ ಪಟ್ಟಣದಲ್ಲಿ ಕಳೆದ ವರ್ಷ ಚಿನ್ನದ ಅಂಗಡಿಯೊಂದರ ಉದ್ಘಾಟನೆ ದಿನ ನಾಮಪಲಕವು ಆಂಗ್ಲ ಭಾಷೆಯಲ್ಲಿರುವುದನ್ನು ಕಂಡು ಕಸಾಪ ಪದಾಧಿಕಾರಿಗಳು ಆ ನಾಮಪಲಕ ತೆರವುಗೊಳಿಸುವಂತೆ ತಾಕೀತು ಮಾಡಿದ್ದರು. ಕೊಟ್ಟಿಗೆಹಾರದ ವ್ಯಾಪಾರ ಕೇಂದ್ರವೊಂದರಲ್ಲಿ ಆಂಗ್ಲ ನಾಮಪಲಕ ತೆರವುಗೊಳಿಸದಿದ್ದರೆ ಕಪ್ಪು ಬಣ್ಣ ಬಳಿಯುವುದಾಗಿ ಹೇಳಿದ್ದರು. ಈಗ ಅದೇ ಕಸಾಪ ಪದಾಧಿಕಾರಿಗಳು ಆಂಗ್ಲ ಲಿಪಿಯ ಅಕ್ಷರ ಮಾಲೇ ಹೊಂದಿರುವ ಕೈಚೀಲ ತಂದು ಕ್ನನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿದ್ದ ಶಿಕ್ಷಕರು ಮತ್ತು ನೌಕರರು ಆಂಗ್ಲ ಅಕ್ಷರ ಹೊಂದಿದ್ದ ಕೈಚೀಲವನ್ನು ಪಡೆದು, ಕನ್ನಡ ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೊಂಡೊಯ್ದಾಗ ಕೈಚೀಲದ ಮೂಲಕ ಇಂಗ್ಲೀಷ್ ಪ್ರಚಾರಕ್ಕೆ ಹೊರಟ್ಟಿದ್ದೀರಾ ಎಂದು ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಪ್ರಶ್ನಿಸಿದರೆ ನಮ್ಮ ಮಾನ ಉಳಿಯದು ಎಂದು ಶಿಕ್ಷಕರು ಮತ್ತು ನೌಕರರು ಅಳಲು ತೋಡಿಕೊಳ್ಳುತ್ತಿದ್ದರು.