ಚಾಮರಾಜನಗರ: ಅಧಿಕ ಭಾರಹೊತ್ತು ಲಾರಿಗಳು ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ರಸ್ತೆ ಹಾಳಾಗುತ್ತಿದೆ ಎಂದು ಗುಂಡ್ಲುಪೇಟೆ ತಾಲೂಕಿನ ಕಗ್ಗಳಹುಂಡಿ ವ್ಯಾಪ್ತಿಯ ಗ್ರಾಮಸ್ಥರು ಆರೋಪಿಸಿದ್ದು, ಅಧಿಕ ಭಾರ ಹೊತ್ತು ತೆರಳುವ ಲಾರಿಗಳನ್ನು ತಡೆದು ಪೊಲೀಸರಿಗೆ ಒಪ್ಪಿಸುತ್ತಿರುವ ಘಟನೆ ನಡೆಯುತ್ತಿದೆ.
ಕಗ್ಗಳದಹುಂಡಿ ಸಮೀಪ ಚೀನಾ ಮೂಲದ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಆರಂಭವಾಗುತ್ತಿದೆ. ಈ ಘಟಕವನ್ನು ನಿರ್ಮಾಣ ಮಾಡದಂತೆ ರೈತರು ಹಗಲಿರುಳು ಪ್ರತಿಭಟನೆ ಮಾಡಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಘಟಕದಿಂದ ಸುತ್ತಮುತ್ತಲಿನ ರೈತರಿಗೆ ತೊಂದರೆಯಾಗುತ್ತದೆ ಎಂಬುದು ಕೆಲವು ರೈತರ ಆರೋಪವಾಗಿದೆ. ಈ ನಡುವೆ ಕಾರ್ಖಾನೆ ನಿರ್ಮಾಣಕ್ಕಾಗಿ ದಿನನಿತ್ಯ ಇಲ್ಲಿಗೆ ಲಾರಿಗಳಲ್ಲಿ ಸರಕು ಸಾಗಾಣೆಯಾಗುತ್ತಿದ್ದು, ಲಾರಿಗಳಲ್ಲಿ ನಿಯಮ ಮೀರಿ ಅಧಿಕ ಭಾರದ ಸರಕನ್ನು ಸಾಗಾಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಲಾರಿಗಳನ್ನು ತಡೆದು ಪೊಲೀಸರ ವಶಕ್ಕೆ ನೀಡುತ್ತಿದ್ದಾರೆ.
ಕಗ್ಗಳದ ಹುಂಡಿ ಸಮೀಪದಲ್ಲಿ ಚೀನಾ ಮೂಲದ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಸ್ಥಾಪನೆ ಕಾಮಗಾರಿಗೆ ಈ ರಸ್ತೆಯಲ್ಲಿ ಸಂಚರಿಸುವ ಸರಕು ಸಾಗಾಣೆ ಮಾಡುವ ವಾಹನಗಳು 10 ಟನ್ ಗೆ ಮೀರದಂತೆ ಪಂಚಾಯತ್ ರಾಜ್ ಉಪ ವಿಭಾಗವು ಅನುಮತಿ ನೀಡಿದ್ದರೂ, ಪ್ರತಿ ದಿನವೂ ನಿಯಮಮೀರಿ ಹೆಚ್ಚಿನ ಭಾರವನ್ನು ಹೊತ್ತ ಲಾರಿಗಳು ಸಂಚಾರ ನಡೆಸುತ್ತಿವೆ ಎಂಬುದು ರೈತರ ಆರೋಪವಾಗಿದ್ದು, ಇದನ್ನು ವಿರೋಧಿಸಿ ರೈತರು ಲಾರಿಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದುವರೆಗೆ ಅಧಿಕ ಭಾರ ಸಾಗಿಸುತ್ತಿದ್ದ ಮೂರು ಲಾರಿಗಳನ್ನು ವಶಕ್ಕೆ ಪಡೆದಿರುವ ತೆರಕಣಾಂಬಿ ಠಾಣೆ ಪೊಲೀಸರು. ಅಧಿಕ ಭಾರ ಸಾಗಿಸುತ್ತಿರುವುದು ಖಚಿತವಾಗಿರುವ ಹಿನ್ನಲೆಯಲ್ಲಿ ಕಾನೂನು ಕ್ರಮ ಕೈಗೊಂಡಿದ್ದಾರೆ. ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ಗೊತ್ತಿದ್ದರೂ ಅಧಿಕ ಭಾರದ ಸರಕು ಸಾಗಿಸುವುದನ್ನು ಮಾತ್ರ ಕಾರ್ಖಾನೆಯವರು ನಿಲ್ಲಿಸದಿರುವುದು ಅಚ್ಚರಿ ತಂದಿದೆ.