ಗುಂಡ್ಲುಪೇಟೆ: ಶಿವರಾತ್ರಿ ದಿನದಂದು ಸುಮಾರು 350 ವರ್ಷ ವಯಸ್ಸಿನ ಅರಳಿ ಮರದ ಪಾಶ್ರ್ವವೊಂದು ಮುರಿದು ಬಿದ್ದಿರುವ ಘಟನೆ ತಾಲೂಕಿನ ತ್ರಿಯಂಭಕಪುರ ಗ್ರಾಮದಲ್ಲಿ ನಡೆದಿದ್ದು ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತ್ರಿಯಂಭಕಪುರ ಗ್ರಾಮದ ಪ್ರವೇಶದಲ್ಲಿ ತ್ರಿಯಂಭಕೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಹಾಗೂ ಗ್ರಾಮಸ್ಥರಿಗೆ ಕಳೆದ 3 ಶತಮಾನಗಳಿಂದ ನೆರಳು ನೀಡುತ್ತಿದ್ದು ಪ್ರತಿ ವರ್ಷವೂ ವಸಂತ ಮಾಸದಲ್ಲಿ ಪಿಂಕ್ ಹಾಗೂ ಹಸಿರು ಬಣ್ಣದ ಎಲೆಗಳು ಚಿಗುರುತ್ತಿದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿತ್ತು. ಕಳೆದ 5 ವರ್ಷದ ಹಿಂದೆ ಗ್ರಾಮದ ದೇವಸ್ಥಾನವನ್ನು ದಾನಿಗಳ ನೆರವಿನಿಂದ ಜೀರ್ಣೋದ್ಧಾರಗೊಳಿಸುವ ಸಂದರ್ಭದಲ್ಲಿ ಈ ಮರದ ಕೆಳಗೆ ತೆರಕಣಾಂಬಿಯ ಉದ್ಯಮಿ ಎಂ.ಶ್ರೀನಾಥ್ ಎಂಬುವರು ನಾಗರ ಕಲ್ಲು ಪ್ರತಿಷ್ಠ್ಟಾಪಿಸಿ ಸುತ್ತಲೂ ಪ್ರದಕ್ಷಿಣೆ ಮಾಡಲು ಅನುಕೂಲವಾಗುವಂತೆ ವಿಶಾಲವಾದ ಜಗುಲಿಯನ್ನು ನಿರ್ಮಿಸಿದ್ದರು. ಅಲ್ಲದೆ ಗ್ರಾಮದ ಜನರು ಬೇಸಿಗೆಯ ಸಂದರ್ಭದಲ್ಲಿ ಈ ಮರದ ನೆರಳಿನಲ್ಲಿ ಕುಳಿತುಕೊಳ್ಳುತಿದ್ದರು.
ಮಹಾ ಶಿವರಾತ್ರಿಯ ರಾತ್ರಿ ಜಾಗರಣೆ ಸಂದರ್ಭದಲ್ಲಿ ಎಲ್ಲರೂ ದೇವಸ್ಥಾನದಲ್ಲಿರುವ ಸಂದರ್ಭದಲ್ಲಿ ಮರದ ಒಂದು ಪಾಶ್ರ್ವ ಮಾತ್ರ ನಾಗರಕಲ್ಲಿನ ಮಂಟಪದ ಮೇಲೆ ಮಾತ್ರ ಬಿದ್ದಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.