ಸೋಮವಾರಪೇಟೆ: ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಮೀಪದ ಗೌಡಳ್ಳಿ ವಿದ್ಯಾಸಂಸ್ಥೆ, ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಪುರ ಪ್ರವೇಶ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ರೈತರೊಬ್ಬರು ಸಾಲಮನ್ನಾ ಮಾಡುವಂತೆ ವೇದಿಕೆಯಲ್ಲಿದ್ದ ವಿವಿಧ ಪಕ್ಷಗಳ ಮುಖಂಡರನ್ನು ಒತ್ತಾಯಿಸಿದಾಗ ಮಾತನಾಡಿದರು.
ಮುಂದಿನ ಒಂದು ವರ್ಷದಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು. ಅಲ್ಲಿಯವರಗೆ ರೈತರು ಆತಂಕಪಡಬಾರದು. ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು.
ಜೆಡಿಎಸ್ ಪಕ್ಷದ ನಾಯಕ ನಾನೇ ಅಗಿರುವುದರಿಂದ ಈ ಘೋಷಣೆ ಮಾಡುತ್ತಿದ್ದೇನೆ. ಆದರೆ ಬಿಜೆಪಿ, ಕಾಂಗ್ರೆಸ್, ನಾಯಕರು ವೇದಿಕೆಯಲ್ಲಿ ಇದ್ದರೂ, ಅವರು ಸಾಲಮನ್ನಾದ ಘೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ಅವರು ನಾಯಕರು ಅದೇಶಕ್ಕಾಗಿ ಕಾಯಬೇಕು ಎಂದು ಹೇಳಿದರು. ಈ ಹಿಂದೆ 20ತಿಂಗಳು ನಾನು ಮುಖ್ಯಮಂತ್ರಿಯಾದ ಸಂದರ್ಭ ಎರಡೂವರೆ ಕೋಟಿ ರೂ. ರೈತರ ಸಾಲಮನ್ನಾ ಮಾಡಲಾಗಿತ್ತು. ಇಚ್ಚಾಶಕ್ತಿ ಇದ್ದರೆ ಸರ್ಕಾರಗಳು ರೈತರ ಸಾಲಮನ್ನಾಕ್ಕೆ ಕ್ರಮಕೈಗೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭ ವೇದಿಕೆಯಲ್ಲಿದ್ದ ಕೇಂದ್ರ ಸಚಿವ ಸದಾನಂದಗೌಡ ಎದ್ದು ನಿಂತು, ರಾಜಕೀಯ ಮಾತನಾಡಲು ಈ ವೇದಿಕೆ ಸೂಕ್ತವಲ್ಲ. ಆದರೂ ಮಾತನಾಡುತ್ತೇನೆ. ಈ ಹಿಂದೆ ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಸಾಲಮನ್ನಾ ಹಾಗು ಬಿಜೆಪಿಯ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೈತರ 25ಸಾವಿರ ರೂ. ಸಾಲಮನ್ನಾ ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ, ರೈತರ ಸಾಲಮನ್ನಾ ಮಾಡುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
ನಂತರ ಕುಮಾರಸ್ವಾಮಿ ಮಾತು ಮುಂದುವರಿಸಿ, ಯಾವುದೇ ಸರಕಾರಗಳು ಶಿಕ್ಷಣಕ್ಕೆ ಅದ್ಯತೆ ನೀಡುವಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದರೆ ಮಾತ್ರ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಯಾವುದೇ ಸರಕಾರಗಳು ಕೂಡ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿವೆ. ಇಂತಹ ಸಂದರ್ಭದಲ್ಲಿ ಯಾವುದೇ ನಿರೀಕ್ಷೆಗಳನ್ನು ಆಪೇಕ್ಷಿಸದೇ ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡುವಲ್ಲಿ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಹೆಚ್ಚು ಶ್ರಮಿಸಿದೆ. ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಭಾಗದ ಪ್ರತಿಯೋರ್ವ ಮಕ್ಕಳಿಗೂ ಶಿಕ್ಷಣ ಸಂಜೀವಿನಿಯಾಗಬೇಕೆಂದು ಆಶಿಸಿದರು.