ಮೂಡಿಗೆರೆ: ಟಿಎಪಿಸಿಎಂಎಸ್ನ ಮೆಡಿಕಲ್ ನಿರ್ಮಿಸಲು ತೆರವುಗೊಳಿಸಿದ ಎಂಜಿಎಂ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಆವರಣದಲ್ಲಿದ್ದ ತಂಗುದಾಣವನ್ನು ಸಾರ್ವಜನಿಕರು ಹಾಗೂ ಸಂಸ್ಥೆಗಳ ತೀವ್ರ ವಿರೋಧಕ್ಕೆ ಮಣಿದ ಆಸ್ಪತ್ರೆ ಆಡಳಿತ ಪುನಃ ಅದೇ ಸ್ಥಳದಲ್ಲಿ ತಂಗುದಾಣವನ್ನು ನಿರ್ಮಿಸಿ ವಿವಾದಕ್ಕೆ ತೆರೆ ಎಳೆದಿದೆ. ಆಸ್ಪತ್ರೆ ಆವರಣದಲ್ಲಿದ್ದ ಟಿಎಪಿಸಿಎಂಎಸ್ ಮೆಡಿಕಲ್ನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿದ ಆದೇಶದಂತೆ ಕೆಲ ದಿನಗಳ ಹಿಂದೆ ತೆರವುಗೊಳಿಸಲಾಗಿತ್ತು. ನಂತರ ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಒತ್ತಡದಿಂದ ಪಕ್ಕದಲ್ಲಿದ್ದ ತಂಗುದಾಣವನ್ನು ತೆರವುಗೊಳಿಸಿ, ಆ ಸ್ಥಳದಲ್ಲಿ ಮೆಡಿಕಲ್ ಸ್ಥಾಪಿಸಲು ಆಸ್ಪತ್ರೆ ಆಡಳಿತ ಮಂಡಳಿ ತಯಾರಿ ನಡೆಸಿತ್ತು. ಆ ಸಂದರ್ಭದಲ್ಲಿ ಕೆಲ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು.
ತಾಪಂ ಅಧ್ಯಕ್ಷ ಕೆ.ಸಿ.ರತನ್, ತಹಸೀಲ್ದಾರ್ ಡಿ.ನಾಗೇಶ್ ಅವರಿಗೂ ಸೇರಿದಂತೆ ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ್ ಅವರಿಗೂ ದೂರು ನೀಡಲಾಗಿತ್ತು. ತಾಪಂ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ಸಂಸ್ಥೆಗಳ ಮೆಡಿಕಲ್ ಬೇಡ. ಜನರಿಕ್ ಮೆಡಿಕಲ್ ನಿರ್ಮಾಣಕ್ಕೆ ಮುಂದಾಗುವಂತೆ ವೈದ್ಯಾಧಿಕಾರಿಗೆ ಸಭೆ ಸೂಚನೆ ನೀಡಿತ್ತು. ಇವುಗಳಿಗೆ ಮಣಿದ ಆಸ್ಪತ್ರೆ ಆಡಳಿತ ತಂಗುದಾಣ ತೆರವು ಪ್ರಕ್ರಿಯೆಯನ್ನು ಕೈ ಬಿಟ್ಟು, ಸಂಸ್ಥೆಯ ಮೆಡಿಕಲ್ ನಿರ್ಮಾಣ ಸದ್ಯಕ್ಕೆ ಬೇಡವೆಂಬ ನಿರ್ಧಾರಕ್ಕೆ ಬಂದಿತ್ತು. ಅದರಂತೆ ಅದರಂತೆ ತಂಗುದಾಣದ ಕಟ್ಟಡವನ್ನು ಪುನಃ ಯಥಾಸ್ಥಿತಿಯಲ್ಲಿ ನಿರ್ಮಿಸಿ ಪ್ರಕರಣಕ್ಕೆ ಅಂತ್ಯ ಹಾಡಿದೆ.