ತಿ.ನರಸೀಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ, ಶ್ರೀ ಕವಿ ಸರ್ವಜ್ಞ ಹಾಗೂ ಶ್ರೀ ಅಂಬಿಗರ ಚೌಡಯ್ಯರವರ ಜಯಂತಿ ಕಾರ್ಯಕ್ರಮ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯತೆಯಿಂದಾಗಿ ಕಾಟಾಚಾರಕ್ಕೆ ಎಂಬಂತೆ ನಡೆದಿದೆ.
ಬೆಳಿಗ್ಗೆ 10 ಗಂಟೆಗೆ ನಿಗಧಿಯಾಗಿದ್ದ ಕಾರ್ಯಕ್ರಮ 11 ಗಂಟೆಯಾದರೂ ಅಧಿಕಾರಿಗಳು, ಜನಪ್ರತಿನಿಧಿಗಳ ಬಾರದ ಕಾರಣ ವಿಳಂಭವಾಗಿ ಆರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಪಂ ಸದಸ್ಯ ಟಿ.ಎಚ್.ಮಂಜುನಾಥ್ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟನೆಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳು ಪಕ್ಷದ ಕಾರ್ಯಕ್ರಮವಿದೆ ಎಂದು ಕಾರ್ಯಕ್ರಮ ಬಿಟ್ಟು ತೆರಳಿದರು. ಉಳಿದಂತೆ ಬಿಜೆಪಿಯ ಶಿವಮ್ಮ ಹಾಗೂ ಜೆಡಿಎಸ್ ಪಕ್ಷದ ಸಾಜಿದ್ ಅಹಮ್ಮದ್ ಮಾತ್ರ ಕಾರ್ಯಕ್ರಮದಲ್ಲಿ ಉಳಿದುಕೊಂಡರು.
ಕಾರ್ಯಕ್ರಮಕ್ಕೆ ಸಂಘ ಸಂಸ್ಥೆ ಪದಾಧಿಕಾರಿಗಳು, ಸಮಾಜ ಸೇವಕರು, ಮುಖಂಡರು ಭಾಗವಹಿಸಿದ ಕಾರಣ ತಾಲೂಕು ಕಚೇರಿ ಎದುರಿನ ಶ್ರೀ ಗುರುಮಲ್ಲೇಶ್ವರ ಎಜುಕೇಷನ್ ಟ್ರಸ್ಟ್ ವಿದ್ಯಾರ್ಥಿಗಳನ್ನು ಕರೆಸಿ ಕಾರ್ಯಕ್ರಮ ನಡೆಸಿದರು ಸಹ ಶನಿವಾರವಾದ್ದರಿಂದ ವಿದ್ಯಾರ್ಥಿಗಳು ಹೊಟ್ಟೆ ಹಸಿದಿದೆ ಎಂಬ ಕಾರಣ ನೀಡಿ ಕಾರ್ಯಕ್ರಮ ಆರಂಭಗೊಂಡ 10 ನಿಮಿಷದಲ್ಲಿ ಹೊರ ನಡೆದರು. ಇದರಿಂದ ವಿಚಲಿತರಾದ ಮುಖ್ಯ ಭಾಷಣಕಾರರಾದ ಪಿಆರ್ ಎಂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ವೀರಭದ್ರಸ್ವಾಮಿರವರು ಭಾಷಣವನ್ನು ಮೊಟಕುಗೊಳಿಸಿ ಕಾರ್ಯಕ್ರಮದಿಂದ ನಿರ್ಗಮಿಸಿದರು. ಒಟ್ಟಾರೆ ಕಾರ್ಯಕ್ರಮ ಕಾಟಾಚಾರಕ್ಕೆ ಆಯೋಜಿಸಿದಂತೆ ಕಂಡುಬಂತು.