ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನೀರಿಗೆ ತೊಂದರೆ ಕಾಣಿಸಿಕೊಂಡು ವನ್ಯಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದು, ಇವುಗಳಿಗೆ ನೀರು ಒದಗಿಸುವ ಅನಿವಾರ್ಯ ಪರಿಸ್ಥಿತಿ ಬಂದೊದಗಿರುವುದರಿಂದಾಗಿ ಅರಣ್ಯ ಇಲಾಖೆ ಟ್ಯಾಂಕರ್ ಮೂಲಕ ನೀರನ್ನು ಕೊಂಡೊಯ್ದು ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಮುಂದಾಗಿದೆ.
ಈಗಾಗಲೇ ಅಗ್ನಿ ಅನಾಹುತದಿಂದ ಹೆದರಿಂದ ವನ್ಯಪ್ರಾಣಿಗಳು ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ಹೋಗಿದ್ದು, ಅಳಿದುಳಿದ ಪ್ರಾಣಿಗಳು ಕುಡಿಯುವ ನೀರಿಗಾಗಿ ಕೆರೆಗಳನ್ನು ಹುಡುಕಿಕೊಂಡು ಅಲೆದಾಡುತ್ತಿವೆ. ಆದರೆ ಅರಣ್ಯದಲ್ಲಿರುವ ಸುಮಾರು 384 ಕೆರೆಗಳ ಪೈಕಿ ಶೇ.80 ರಷ್ಟು ಕೆರೆಗಳು ಬರಿದಾಗಿವೆ. ಅಷ್ಟೇ ಅಲ್ಲ ಕೆಲವು ಕೆರೆಗಳಲ್ಲಿ ನೀರು ಕಾಣಿಸುತ್ತದೆಯಾದರೂ ಹೂಳು ತುಂಬಿರುವ ಕಾರಣದಿಂದ ಪ್ರಾಣಿಗಳು ಇಳಿದು ಕುಡಿಯುವ ಸ್ಥಿತಿಯಲ್ಲಿ ಇಲ್ಲ. ಹೂಳಿನಲ್ಲಿ ಹೂತು ಕೊಳ್ಳುವ ಭಯದಿಂದ ಅತ್ತ ತೆರಳಲು ಹಿಂದೇಟು ಹಾಕುತ್ತಿವೆ.
ಹಲವು ಪ್ರಾಣಿಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನದತ್ತ ತೆರಳಿ ಕಬಿನಿ ಹಿನ್ನೀರಿನಲ್ಲಿ ಬೀಡು ಬಿಟ್ಟಿವೆ. ಇಲ್ಲಿಗೆ ತೆರಳಿರುವ ಪ್ರಾಣಿಗಳ ಪೈಕಿ ಆನೆಗಳು ಮತ್ತು ಕಾಡು ಕೋಣಗಳು ಸೇರಿವೆ. ಉಳಿದಂತೆ ಸಣ್ಣ ಪುಟ್ಟ ಪ್ರಾಣಿಗಳು ಎಲ್ಲಿಯೂ ತೆರಳಲಾಗದೆ ನೀರಿಗಾಗಿ ಪರದಾಡುತ್ತಿವೆ. ಇದನ್ನು ಮನಗಂಡ ಅರಣ್ಯ ಇಲಾಖೆ ಅರಣ್ಯ ವ್ಯಾಪ್ತಿಯ ಕೆಲವು ಕೆರೆಗಳಿಗೆ ಟ್ಯಾಂಕರ್ ನಲ್ಲಿ ನೀರನ್ನು ತಂದು ಸುರಿಯುತ್ತಿದೆ.
ಪ್ರತಿ ದಿನ ಎರಡು ಟ್ಯಾಂಕರ್ ನಲ್ಲಿ ಹೊರಗಿನಿಂದ ನೀರು ತಂದು ಕೆರೆಗಳನ್ನು ತುಂಬಿಸಲಾಗುತ್ತಿದೆ. ಮತ್ತೊಂದೆಡೆ ಸುಮಾರು 11 ಕೆರೆಗಳಿಗೆ ಸೌರ ವಿದ್ಯುತ್ ಚಾಲಿತ ಮೋಟಾರು ಅಳವಡಿಸಿ ಕೊಳವೆ ಬಾವಿಯಿಂದ ನೀರು ತುಂಬಿಸಲಾಗುತ್ತಿದೆ. ಇದೆಲ್ಲದರ ನಡುವೆ ಕೆರೆಗಳಲ್ಲಿರುವ ಹೂಳನ್ನು ತೆಗೆದು, ಸುತ್ತಲೂ ಬೆಳೆದ ಲಂಟಾನದಂತಹ ಕುರುಚಲು ಕಾಡನ್ನು ತೆರವುಗೊಳಿಸಿ ಪುನಶ್ಚೇತನಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ಈ ಬಾರಿ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಮುಂದಾಗಿರುವುದರಿಂದ ಮಳೆಗಾಲದಲ್ಲಿ ಅರಣ್ಯದ ಎತ್ತರ ಪ್ರದೇಶದಿಂದ ನೀರು ಹರಿದು ಬಂದು ಕೆರೆಯಲ್ಲಿ ಸಂಗ್ರಹವಾಗಲಿದೆ. ಇದರಿಂದ ಅಂತರ್ಜಲ ಹೆಚ್ಚಳವಾಗಲು ಸಾಧ್ಯವಿದೆ. ಈ ಹಿಂದೆಯಿದ್ದ ಜಲಮಾರ್ಗವೂ ಮುಚ್ಚಿಹೋಗಿದ್ದು ಅದನ್ನು ಗುರುತಿಸುವ ಕಾರ್ಯವೂ ನಡೆಯುತ್ತಿದೆ. ಇದುವರೆಗೆ ವಾಡಿಕೆಯ ಮಳೆ ಸುರಿಯುತ್ತಿದ್ದ ಕಾರಣದಿಂದ ನೀರಿನ ಕೊರತೆ ಅರಣ್ಯದಲ್ಲಿ ಕಂಡು ಬರುತ್ತಿರಲಿಲ್ಲ. ಆದರೆ ಈ ಬಾರಿ ಅದರ ತೀವ್ರತೆ ಗೊತ್ತಾಗಿರುವುದರಿಂದ ಅರಣ್ಯದಲ್ಲಿರುವ ಕೆರೆಗಳಲ್ಲಿನ ಹೂಳನ್ನು ತೆಗೆಯುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಜತೆಗೆ ಕೆರೆಯ ಸುತ್ತಲೂ ಇರುವ ಲಂಟಾನವನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಂಡೀಪುರ ಅರಣ್ಯದಲ್ಲಿರುವ ಕೆರೆಗಳಲ್ಲಿ ನೀರು ಸಂಗ್ರಹವಾಗಲು ಸಾಧ್ಯವಾಗಲಿದೆ.