ಹಾಸನ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾಸನ-ಬೆಂಗಳೂರು ರೈಲು ಸಂಚಾರ ಮಾ.15 ರ ನಂತರ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾತನಾಡಿ, ಈಗಾಗಲೇ ಹಾಸನ-ಬೆಂಗಳೂರು ರೈಲು ಸಂಚಾರದ ಕಾಮಗಾರಿ ಮುಗಿದಿದ್ದು, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುವುದಾಗಿ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹೇಳಿರುವುದರಿಂದ ಕೆಲದಿನ ಮುಂದೂಡಾಗಿದೆ ಎಂದರು. ಹಾಸನ ಜಿಲ್ಲೆಯ ಬಹು ಬೇಡಿಕೆಯಾಗಿದ್ದ ಹಾಸನ-ಬೆಂಗಳೂರು ರೈಲು ಸಂಚಾರ ಆರಂಭವಾಗಿರುವುದು ಜನತೆಯಲ್ಲಿ ಸಂತೋಷ ತಂದಿದೆ.
ಹಾಸನದಿಂದ ಬೆಳಿಗ್ಗೆ 6 ಗಂಟೆಗೆ ಹೊರಡುವ ರೈಲು ಬೆಂಗಳೂರಿಗೆ 9.30ಕ್ಕೆ ಬರಲಿದೆ. ಬೆಂಗಳೂರಿನಿಂದ ಸಂಜೆ 6 ಗಂಟೆಗೆ ರೈಲು ಹೊರಟು ರಾತ್ರಿ 9ಕ್ಕೆ ಹಾಸನಕ್ಕೆ ಬರಲಿದೆ. ಮೈಸೂರು-ಶ್ರವಣಬೆಳಗೊಳ ಪ್ಯಾಸೆಂಜರ್ ರೈಲನ್ನು ಬೆಂಗಳೂರಿನವರೆಗೆ ವಿಸ್ತರಿಸುವಂತೆ ಮತ್ತು ಇದೇ ರೈಲು ಪುನಃ ಬೆಂಗಳೂರಿನಿಂದ ಹೊರಟು, ಶ್ರವಣಬೆಳಗೊಳ-ಹಾಸನ ಮಾರ್ಗವಾಗಿ ಮೈಸೂರಿಗೆ ತಲುಪುವಂತೆ ಮನವಿ ಮಾಡಲಾಗಿದೆ.
ಬೆಂಗಳೂರು ಸಿಟಿ-ಮಂಗಳೂರು ಮಂಗಲ ಎಕ್ಸ್ಪ್ರೆಸ್ ರೈಲು ನೇರವಾಗಿ ಬೆಂಗಳೂರಿನಿಂದ ಹಾಸನ-ಮಾರ್ಗವಾಗಿ ಮಂಗಳೂರಿಗೆ ತಲುಪುವಂತೆ ಮಾಡುವುದು, ಯಶವಂತಪುರ-ಕಾರವಾರ ರೈಲು (ಚೇರ್ ಕಾರ್ ರೈಲು) ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತಿದ್ದು, ಈ ರೈಲು ನೇರವಾಗಿ ಯಶವಂತಪುರ-ಹಾಸನ-ಕಾರವಾರವಾಗಿ ಸಂಚರಿಸುವಂತೆಯೂ ಕಾವೇರಿ ಎಕ್ಸ್ಪ್ರೆಸ್ ರೈಲು ಚೆನ್ನೈ-ಮೈಸೂರು ಮಾರ್ಗವಾಗಿ ಸಂಚಾರವನ್ನು ನಡೆಸುತ್ತಿದೆ. ಈ ರೈಲು ಚೆನ್ನೈನಿಂದ ಹೊರಡಲಿದ್ದು, ಇದನ್ನು ಚೆನ್ನೈ-ಬೆಂಗಳೂರು-ಹಾಸನ-ಮಂಗಳೂರಿಗೆ ಸಂಚರಿಸಲು ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಬೆಂಗಳೂರಿನಿಂದ ಚೆನ್ನೈಗೆ ರೈಲು ಸಂಚರಿಸುವಂತೆ ಇದೆಯಾದರೂ ರೈಲನ್ನು ಹಾಸನದವರೆಗೂ ಸಂಚರಿಸಲು ಕೇಳಲಾಗಿದೆ. ಜೊತೆಗೆ ವಾರಕ್ಕೊಮ್ಮೆ ಸ್ವರ್ಣ ಜಯಂತಿ ರೈಲನ್ನು ಹೊಳೆನರಸೀಪುರದಲ್ಲಿ ನಿಲುಗಡೆ ಕೊಡಲು ಮನವಿ ಮಾಡಿದ್ದೇವೆ ಎಂದರು. ಉಳಿದಂತೆ ಬೇಲೂರು, ಚಿಕ್ಕಮಗಳೂರು, ಶೃಂಗೇರಿ ರೈಲು ಮಾರ್ಗ ಇನ್ನು ಕಾಮಗಾರಿ ಪೂರ್ಣ ಆಗಬೇಕಾಗಿದೆ. ಹಾಸನದಿಂದ ಶೃಂಗೇರಿ ರೈಲು ಸಂಚಾರವನ್ನು ಮಾಜಿ ಪ್ರಧಾನಿ ಅವರ ಜನ್ಮದಿನದಂದು ಬಿಡುವಂತೆ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿರುವುದಾಗಿ ಹೇಳಿದರು. 1400 ಕೋಟಿ ರೂ ವೆಚ್ಚದಲ್ಲಿ ಷಟ್ಪಥ ರಸ್ತೆಯಾಗಿ ಆಗಲೀಕರಣ ಮಾಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಗರಿ ಭರವಸೆ ನೀಡಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.