ಮಡಿಕೇರಿ: ಬೇಸಿಗೆ ಕಾಲವಾದ ಕಾರಣ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕುಂಡಾಮೇಸ್ತ್ರಿ ಯೋಜನೆಯ ಮೂಲಕ ನಾಗರೀಕರಿಗೆ ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಸೂಚನೆ ನೀಡಿದ್ದಾರೆ.
ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಕೂಟುಹೊಳೆ ಹಾಗೂ ಕುಂಡಾಮೇಸ್ತ್ರಿ ಯೋಜನೆಯ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಕೂಟುಹೊಳೆಯ ಹಿನ್ನೀರಿನ 1 ಕಿ.ಮೀ. ಉದ್ದ ವ್ಯಾಪ್ತಿಯ 45 ಎಕರೆ ಪ್ರದೇಶದಲ್ಲಿ ಹೂಳು ತೆಗೆಯುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯ ವ್ಯತ್ಯಯವಾಗದಂತೆ ಗಮನಹರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ತಿಳಿಸಿದರು.
ನಗರದ ಜನತೆಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು. ಪ್ರತೀ ದಿನ ಕುಂಡಾಮೇಸ್ತ್ರಿ ಯೋಜನೆಯಿಂದ ಕೂಟುಹೊಳೆಗೆ ನೀರು ಸರಬರಾಜು ಮಾಡಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ವೀಣಾ ಅಚ್ಚಯ್ಯ ನಿರ್ದೇಶನ ನೀಡಿದರು.
ಕುಡಿಯುವ ನೀರು ಯೋಜನೆಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಕುಂಡಾಮೇಸ್ತ್ರಿ ಯೋಜನೆಗಾಗಿಯೇ 30 ಕೋಟಿ ರೂ. ನಿಗದಿಪಡಿಸಲಾಗಿದ್ದು, ಚೆಕ್ಡ್ಯಾಂ ನಿರ್ಮಾಣ ಕಾಮಗಾರಿ ಆರಂಭಿಸಬೇಕಿದೆ ಎಂದು ಅವರು ತಿಳಿಸಿದರು.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಕುಮಾರ್ ಮಾಹಿತಿ ನೀಡಿ ಕೂಟುಹೊಳೆ ಹಿನ್ನೀರು ಪ್ರದೇಶದಲ್ಲಿ ಹೂಳು ತೆಗೆಯುವ ಕಾರ್ಯವು ಸುಮಾರು 1.42 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಹೆಚ್ಚುವರಿ ನೀರು ಸಂಗ್ರಹಣೆಗೆ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚುಮ್ಮಿದೇವಯ್ಯ, ಸದಸ್ಯರಾದ ಎಚ್.ಎಂ.ನಂದಕುಮಾರ್, ಮನ್ಸೂರ್, ಜುಲೇಕಾಬಿ, ಲೀಲಾ ಶೇಷಮ್ಮ, ಪ್ರಕಾಶ್ ಆಚಾರ್ಯ, ಪೀಟರ್, ಪೌರಾಯುಕ್ತರಾದ ಬಿ.ಶುಭ ಮತ್ತಿತರರು ಈ ಸಂದರ್ಭ ಹಾಜರಿದ್ದರು.