ಮಡಿಕೇರಿ: ನಗರಸಭೆ ವ್ಯಾಪ್ತಿಯ ಜಲಮೂಲಗಳನ್ನು ಅಕ್ರಮವಾಗಿ ಮಣ್ಣು ಹಾಕಿ ಮುಚ್ಚಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ನಗರಸಭಾ ಸಭಾಂಗಣದಲ್ಲಿ ತುರ್ತು ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕರು ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಮತ್ತು ದಿನದ 24 ಗಂಟೆಯೂ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರನ್ನು ಆಲಿಸಲು ಸಹಾಯವಾಣಿ ಕಾರ್ಯನಿರ್ವಹಿಸಲಿದೆ ಎಂದರು.
ನಗರದಲ್ಲಿ ಕೆಲವು ಕೆರೆಗಳು ಸೇರಿದಂತೆ ಜಲಮೂಲಗಳನ್ನು ಮಣ್ಣಿನಿಂದ ಮುಚ್ಚಲಾಗಿದೆ. ಈ ರೀತಿಯ ಪ್ರಕರಣಗಳನ್ನು ಪತ್ತೆ ಹಚ್ಚಿ ಕೆರೆ ಮುಚ್ಚಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.
ಕುಂಡಾಮೇಸ್ತ್ರಿಯಲ್ಲಿ ಸಾಕಷ್ಟು ನೀರಿದ್ದು, ಸುಮಾರು 1.50 ಕೋಟಿ ರೂ.ವೆಚ್ಚದಲ್ಲಿ ಕೂಟುಹೊಳೆಯ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರು ನೀರನ್ನು ಪೋಲು ಮಾಡುವುದನ್ನು ತಡೆಯಲು ಮೀಟರ್ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಪರೀಕ್ಷಾರ್ಥ ಪ್ರಯೋಗವಾಗಿ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೌರಾಯುಕ್ತರು ಹಾಗೂ ಅಧಿಕಾರಿಗಳ ಮನೆಗಳಿಗೆ ಮೀಟರ್ ಅಳವಡಿಸಲಾಗುವುದೆಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಖಾಸಗಿ ಬಸ್ ನಿಲ್ದಾಣದ ಯೋಜನೆ ಪುನರ್ ಪರಿಶೀಲನೆ:
ರೇಸ್ಕೋರ್ಸ್ ರಸ್ತೆ ಬಳಿ ಈಗಾಗಲೇ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಬಸ್ ನಿಲ್ದಾಣಕ್ಕೆ ಇದು ಯೋಗ್ಯವಾದ ಜಾಗವಲ್ಲ. ಅಡಿಪಾಯದ ಗುಂಡಿಯಲ್ಲಿ 5 ಅಡಿಯಷ್ಟು ನೀರು ನಿಂತಿದೆ. ಅಲ್ಲದೆ ರಾಜಾಸೀಟು ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಅಭಿಪ್ರಾಯಪಟ್ಟ ಶಾಸಕ ಅಪ್ಪಚ್ಚು ರಂಜನ್ ಯೋಜನೆಯನ್ನು ಪುನರ್ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯುವುದಾಗಿ ಹೇಳಿದರು.
ರಾಜಾಸೀಟು ಅಕ್ರಮ ಅಧಿವೇಶನದಲ್ಲಿ ಚರ್ಚೆ:
ರಾಜಾಸೀಟು ಉದ್ಯಾನವನದಲ್ಲಿ ನಡೆದ ಫಲಪುಷ್ಪ ಪ್ರದರ್ಶನಕ್ಕಾಗಿ ಸುಮಾರು 8 ಲಕ್ಷ ರೂ. ಡ್ರಾ ಮಾಡಿರುವ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸುವುದಾಗಿ ಶಾಸಕರು ಇದೇ ಸಂದರ್ಭ ಸ್ಪಷ್ಟಪಡಿಸಿದರು.
ಬಸ್ ನಿಲ್ದಾಣಕ್ಕೆ ಆಕ್ಷೇಪ:
ನಗರಸಭಾ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್.ರಮೇಶ್ ಹಾಗೂ ಸದಸ್ಯರಾದ ಉಣ್ಣಿಕೃಷ್ಣನ್ ಖಾಸಗಿ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ವಾಹನದಟ್ಟಣೆ ಹೆಚ್ಚಾಗುವುದಲ್ಲದೆ ಪಾರ್ಕಿಂಗ್ ಅವ್ಯವಸ್ಥೆಯಿಂದ ವಾಹನಗಳ ಓಡಾಟಕ್ಕೆ ಅಡ್ಡಿಯಾಗಲಿದೆ ಎಂದು ಗಮನ ಸೆಳೆದರು. ಯೋಜನೆಯನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದರು. ನಗರದಲ್ಲಿ ಜಲಮೂಲಗಳು ಮುಚ್ಚಲ್ಪಡುತ್ತಿರುವುದು ಮತ್ತು ಒತ್ತುವರಿಯಾಗುತ್ತಿರುವ ಬಗ್ಗೆ ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೆರೆಗಳ ಸರ್ವೇ ಕಾರ್ಯ ನಡೆಸಿ ನಗರಸಭೆ ತನ್ನ ಸ್ವಾಧೀನಕ್ಕೆ ಪಡೆದು ಸಂರಕ್ಷಿಸಬೇಕೆಂದು ಸೂಚನೆ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಸಾರ್ವಜನಿಕರು ತಮ್ಮನ್ನು ನೇರವಾಗಿ ಸಂಪರ್ಕಿಸಬಹುದೆಂದರು.
ಸಭೆಯಲ್ಲಿ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್, ಮೂಡಾ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ಪೌರಾಯುಕ್ತರಾದ ಬಿ.ಶುಭ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕುಂಡಾಮೇಸ್ತ್ರಿಗೆ ಭೇಟಿ:
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ನಗರಸಭೆಯ ಪ್ರತಿನಿಧಿಗಳು ಕುಡಿಯುವ ನೀರಿನ ಮೂಲಗಳಾದ ಕೂಟುಹೊಳೆ, ಕುಂಡಾಮೇಸ್ತ್ರಿ ಹಾಗೂ ನಿರ್ಮಾಣ ಹಂತದಲ್ಲಿರುವ ನೂತನ ಖಾಸಗಿ ಬಸ್ ನಿಲ್ದಾಣದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಫೋಟೋ :: ನಗರಸಭೆ, ಬಸ್ ಸ್ಟ್ಯಾಂಡ್