ಚಾಮರಾಜನಗರ: ಭೂಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸಿ 40 ಎಕರೆ ಭೂಮಿ ಖರೀದಿ ಮಾಡಿ ಅದರಲ್ಲಿ ಟೈಗರ್ ರಾಂಚ್ ರೆಸಾರ್ಟ್ ನಿರ್ಮಿಸಿರುವ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಗೆ ಸೇರಿದ ರೆಸಾರ್ಟ್ ಹಾಗೂ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅದರಂತೆ ಕಂದಾಯ ಇಲಾಖೆಯ ದಾಖಲೆಗೆ ಸೇರಿಸಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಫೆ.20ರಂದೇ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಗೋ.ಮಧುಸೂದನ್ ಅವರು ಸಂಬಂಧಿ ಟಿ.ಎಲ್.ಜಯಲಕ್ಷ್ಮಿ ಎಂಬುವರ ಹೆಸರಿನಲ್ಲಿ ಹಂಗಳ ಹೋಬಳಿಯ ಮಂಗಲ ಗ್ರಾಮದ ಬಳಿ ಕೃಷಿ ಉದ್ದೇಶಕ್ಕಾಗಿ ಗಿರಿಜನರಿಂದ 40 ಎಕರೆ ಭೂಮಿಯನ್ನು ಕಾನೂನು ಉಲ್ಲಂಘಿಸಿ ಖರೀದಿಸಿದ್ದರು. ಈ ಸಂದರ್ಭ ಅವರು ತಾವು ಮೂಲತಃ ವ್ಯವಸಾಯಗಾರರೆಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿ 1961ರ ಭೂಸುಧಾರಣಾ ಕಾಯ್ದೆ 80ರನ್ವಯ 1995ರಲ್ಲಿ ನಂಜನಗೂಡು ಉಪವಿಭಾಗಾಧಿಕಾರಿಗಳಿಂದ ಅನುಮತಿ ಪಡೆದಿದ್ದರು. ಆದರೆ ಅವರು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಸರ್ಕಾರದ ಗಮನಕ್ಕೂ ತರದೆ ಅಂದಿನ ಉಪವಿಭಾಗಾಧಿಕಾರಿಗಳು ಈ ಭೂಮಿಯನ್ನು ಅನ್ಯಕ್ರಾಂತ ಮಾಡಿಕೊಟ್ಟಿದ್ದರು ಎನ್ನಲಾಗಿದೆ.
ಖರೀದಿಸಿದ ಜಾಗದಲ್ಲಿ ಗೋ.ಮಧುಸೂದನ್ ಅವರು ನಿಯಮ ಉಲ್ಲಂಘಿಸಿ ರೆಸಾರ್ಟ್ ನಡೆಸುತ್ತಿದ್ದರು. ಇದು ಹಲವರ ಕೆಂಗಣ್ಣಿಗೆ ಕಾರಣವಾಗಿತ್ತಲ್ಲದೆ, ಈ ಬಗ್ಗೆ ಆರೋಪಗಳು ಕೇಳಿಬಂದಿತ್ತಲ್ಲದೆ, ದೂರುಗಳನ್ನು ನೀಡಲಾಗಿತ್ತು. ಈ ಸಂಬಂಧ 2015-16ರಲ್ಲಿ ಅಂದಿನ ಚಾಮರಾಜನಗರ ಜಿಲ್ಲಾಧಿಕಾರಿಗಳು ಹಾಗೂ ಮೈಸೂರಿನ ಪ್ರಾಜೆಕ್ಟ್ ಟೈಗರ್ ಯೋಜನೆಯ ಪಿಸಿಸಿಎಫ್ ಅವರು ಬೆಂಗಳೂರಿನ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದಾಗ ಜಮೀನು ಖರೀದಿ ಸಂದರ್ಭ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಗೋ ಮಧೂಸೂದನ್ ಮತ್ತು ಜಯಲಕ್ಷ್ಮಿರವರ ಒಡೆತನದಲ್ಲಿರುವ ಗಿರಿಜನರ ಭೂಮಿಯನ್ನು ಕಂದಾಯ ಇಲಾಖೆಯ ವಶಕ್ಕೆ ತೆಗೆದುಕೊಳ್ಳುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.