ಚಿಕ್ಕಮಗಳೂರು: ಕನ್ನಡ ಪೂಜೆಯಿಂದ ವಿಶೇಷತೆ ಪಡೆದಿರುವ ನಗರ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ದ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯ ಇದೀಗ ಮಹಿಳೆಯರಿಂದಲೇ ಉತ್ಸವ ನಡೆಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಶ್ರೀಕೋದಂಡರಾಮಚಂದ್ರಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಅಶ್ವಾರೂಡೋತ್ಸವಕ್ಕೆ ಸಿದ್ದತೆ ನಡೆದಿತ್ತು. ಸಂಪ್ರದಾಯದಂತೆ ನೂರಾರು ವರ್ಷಗಳಿಂದ ಪುರುಷರೇ ಉತ್ಸವ ಮೂರ್ತಿಯ ಅಡ್ಡೆಯನ್ನು ಹೊರುವುದು, ನಂತರ ರಥ ಎಳೆಯುವುದು ಪರಂಪರಾಗತವಾಗಿ ನಡೆದು ಬಂದಿತ್ತು. ಆದರೆ ಈ ವೇಳೆ ಸ್ಥಳದಲ್ಲಿದ್ದ ಕೋಟೆ ಬಡಾವಣೆಯ ಲಕ್ಷ್ಮೀ ಭಜನಾ ಮಂಡಳಿಯ ಮಹಿಳೆಯರು ಈ ಬಾರಿ ಉತ್ಸವವನ್ನು ತಾವೇ ನಡೆಸುವ ಇಚ್ಚೆಯನ್ನು ದೇವಾಲಯದ ಪ್ರಧಾನ ಅರ್ಚಕ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರಲ್ಲಿ ತೋಡಿಕೊಂಡರು. ಇದಕ್ಕೆ ಸಂತಸದಿಂದ ಸ್ಪಂದಿಸಿದ ಕಣ್ಣನ್ ಅವರು ಹಸಿರು ನಿಶಾನೆ ತೋರುತ್ತಿದ್ದಂತೆ ಉಲ್ಲಸಿತರಾದ ಮಹಿಳೆಯರು ಪುರುಷರನ್ನು ಬದಿಗೊತ್ತಿ ಸಂಭ್ರಮದಿಂದ ಬಹಳಷ್ಟು ತೂಕದ ಉತ್ಸವ ಮೂರ್ತಿಯ ಅಡ್ಡೆಯನ್ನು ನಿರಾಯಾಸವಾಗಿ ಹೊತ್ತು ದೇವಾಲಯದ ಪ್ರಾಂಗಣದಲ್ಲಿ ಮೆರವಣಿಗೆ ನಡೆಸಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ರಥದಲ್ಲಿ ಪ್ರತಿಷ್ಠಾಪಿಸಿದರು. ಇಷ್ಟಕ್ಕೇ ತೃಪ್ತರಾಗದ ಮಹಿಳೆಯರು ನಂತರ ಮಂಗಳವಾದ್ಯ ಮತ್ತು ವೇದಘೋಷದ ನಡುವೆ ಸಾಮೂಹಿಕವಾಗಿ ಭಜನೆ ಮಾಡುತ್ತಾ ರಥವನ್ನು ದೇವಾಲಯದ ಸುತ್ತ ಎಳೆಯುವ ಮೂಲಕ ನೆರೆದಿದ್ದ ನೂರಾರು ಭಕ್ತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದರು.