ಗೋಣಿಕೊಪ್ಪಲು: ಇತ್ತೀಚೆಗೆ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದ ಬಾಲಕರ ಬಿಸಿಎಂ ವಸತಿ ಶಾಲೆಗೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಸದಸ್ಯೆ ಸರೋಜಮ್ಮ ಭೇಟಿ ಸಂದರ್ಭ ದಾಖಲೆಯಲ್ಲಿ 60 ವಿದ್ಯಾರ್ಥಿಗಳು ಹಾಗೂ ಹಾಜರಾತಿ 36 ಮಾತ್ರ ಇದ್ದದು ಬೆಳಕಿಗೆ ಬಂದಿದ್ದು, ಜಿ.ಪಂ.ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ ಅವರ ಸೂಚನೆ ಮೇರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್ ಅವರು ಅಲ್ಲಿನ ನಿಲಯದ ವಾರ್ಡನ್ ಚಿಣ್ಣಪ್ಪ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ ತಿತಿಮತಿ ಮರೂರು ಗ್ರಾಮದ ಸರ್ಕಾರಿ ಗಿರಿಜನ ಆಶ್ರಮ ಶಾಲೆಗೆ ಶುಕ್ರವಾರ ವಿಜು ಸುಬ್ರಮಣಿ ಅವರು ದಿಢೀರ್ ಭೇಟಿ ನೀಡಿದ ಸಂದರ್ಭ ಸುಮಾರು 63 ವಿದ್ಯಾರ್ಥಿಗಳು ಗೈರು ಹಾಜರಾಗಿರುವುದು ಬೆಳಕಿಗೆ ಬಂದಿದೆ. ಒಟ್ಟು 2016-17 ನೇ ಸಾಲಿಗೆ 203 ವಿದ್ಯಾರ್ಥಿಗಳು ದಾಖಲಾತಿಯಾಗಿದ್ದು, 140 ಮಕ್ಕಳು ಮಾತ್ರ ಶಾಲೆಗೆ ಹಾಜರಾಗಿರುವುದು ಗಮನಕ್ಕೆ ಬಂದು ಸಿಡಿಮಿಡಿಗೊಂಡರು.
ತಿತಿಮತಿ-ಮರೂರು ಆಶ್ರಮ ಶಾಲೆ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ( ಐಟಿಡಿಪಿ) ಕೆ ಒಳಪಟ್ಟಿದ್ದು ಯೋಜನಾ ಸಮನ್ವಯಾಧಿಕಾರಿಯಾಗಿ ಇದೀಗ ಪ್ರಕಾಶ್ ನಿಯೋಜಿತಗೊಂಡಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 11 ಆಶ್ರಮ ಶಾಲೆಗಳಿದ್ದು ವೀರಾಜಪೇಟೆ ತಾಲೂಕಿನಲ್ಲಿ-6, ಸೋಮವಾರಪೇಟೆ ತಾಲೂಕಿನಲ್ಲಿ-3 ಹಾಗೂ ಮಡಿಕೇರಿ ತಾಲೂಕಿನಲ್ಲಿ-2 ಆಶ್ರಮ ಶಾಲೆಗಳಿವೆ. ಇದೀಗ ಆಲೂರು ಸಿದ್ದಾಪುರದ ವಾರ್ಡನ್ ಅವರ ಬೇಜವಾಬ್ದಾರಿ ವರ್ತನೆ ಹಾಗೂ ಸರೋಜಮ್ಮ ಅವರ ಆರೋಪ ಸಾಬೀತು ಹಿನ್ನೆಲೆ ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಸುರೇಶ್ ಕ್ರಮ ಜರುಗಿಸಿದ್ದಾರೆ. ಸದರಿ ಚಿಣ್ಣಪ್ಪ ಅವರು ನಿವೃತ್ತ ಪ್ರಾಧ್ಯಾಪಕರಾಗಿ ವಾರ್ಡನ್ ಹುದ್ದೆಗೆ ನಿಯೋಜಿತಗೊಂಡಿದ್ದರು.
ತಿತಿಮತಿ ಆಶ್ರಮ ಶಾಲೆಯಲ್ಲಿ 8 ಮಂದಿ ಶಿಕ್ಷಕರು ಹಾಗೂ 8 ಮಂದಿ ಸಿಬ್ಬಂದಿಗಳಿದ್ದು ಆವರಣ ಸ್ವಚ್ಛತೆ, ಮಕ್ಕಳ ಆರೋಗ್ಯ, ಕುಡಿಯುವ ನೀರಿನ ಶುದ್ಧೀಕರಣ, ಸಮವಸ್ತ್ರ, ಪಾಕ ಕೊಠಡಿ ಹಾಗೂ ಆಹಾರ ಗೋದಾಮು ವೀಕ್ಷಣೆ ಮಾಡಿದ ವಿಜು ಸುಬ್ರಮಣಿ ಅವರು ಕೆಲವೊಂದು ಸಲಹೆ ಸೂಚನೆ ನೀಡಿದರು.
ಸುಮಾರು 63 ಮಕ್ಕಳ ಗೈರುಹಾಜರಾತಿ ಬಗ್ಗೆ ಮುಖ್ಯಶಿಕ್ಷಕ ಮತ್ತು ವಾರ್ಡನ್ ಹುದ್ದೆಯನ್ನು ವಹಿಸಿಕೊಂಡಿರುವ ಸಿದ್ಧಲಿಂಗಶೆಟ್ಟಿ ಅವರನ್ನು ವಿಚಾರಿಸಲಾಗಿ ಕೆಲವು ಮಕ್ಕಳನ್ನು ಪೋಷಕರು ಭೂಮಿ ಮತ್ತು ವಸತಿ ಹೋರಾಟಕ್ಕಾಗಿ ದಿಡ್ಡಳ್ಳಿಗೆ ಕರೆದೊಯ್ದಿರುವುದಾಗಿ ಮಾಹಿತಿ ನೀಡಿದರು. ಒಟ್ಟು 203 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಮಾತ್ರ ಮನೆಯಿಂದ ಶಾಲೆಗೆ ಹಾಜರಾಗುತ್ತಿದ್ದು, ವಸತಿ ನಿಲಯದಲ್ಲಿ ಸುಮಾರು 43 ಮಕ್ಕಳ ಗೈರು ಹಾಜರಿ ಬಗ್ಗೆ ಕೂಡಲೇ ಪರಿಶೀಲನೆ ಮಾಡಿ ತಮಗೆ ವರದಿ ನೀಡಲು ಸೂಚನೆ ನೀಡಿದರು.
6 ಮಕ್ಕಳಿಗೆ ಸಾಂಕ್ರಾಮಿಕ ರೋಗ:
ಪರಿಶೀಲನೆ ಸಂದರ್ಭ ಒಟ್ಟು 6 ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗಾಣುಗಳಿಂದಾಗಿ ಜ್ವರದಲ್ಲಿ ಬಳಲುತ್ತಿದ್ದುದು ಕಂಡು ಬಂತು. ವಿದ್ಯಾರ್ಥಿಗಳನ್ನು ಸಂಚಾರಿ ಆಸ್ಪತ್ರೆಯ ಡಾ. ರವೀಂದ್ರ ಅವರು ತಪಾಸಣೆ ಮಾಡಿದ್ದು, ರಕ್ತ ಮತ್ತು ಮೂತ್ರದ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿರುವದಾಗಿ ಮುಖ್ಯ ಶಿಕ್ಷಕ ಸಿದ್ಧಲಿಂಗಶೆಟ್ಟಿ ಮಾಹಿತಿ ನೀಡಿದರು. ಇಬ್ಬರು ವಿದ್ಯಾರ್ಥಿಗಳು ಗುಣಮುಖರಾಗಿದ್ದು, ಇನ್ನು ನಾಲ್ವರು ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಯಿತು.
ಆಶ್ರಮ ವಸತಿ ನಿಲಯದ ಮುಂಭಾಗ ಕೊಳಚೆ ನೀರು ಮಡುಗಟ್ಟಿ ನಿಂತಿದ್ದು, ಸರಾಗವಾಗಿ ನೀರು ಹರಿದು ಹೋಗಲು ಚರಂಡಿ ಕಾಮಗಾರಿ ನಡೆಯುತ್ತಿದೆ. ಇದೇ ಸಂದರ್ಭ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಮಕ್ಕಳ ಸ್ನಾನಕ್ಕೆ ನೀಡಲಾಗುವ ಸೋಪು, ವಾರಕ್ಕೆ ಮೂರು ದಿನ ಸ್ನಾನ ಮಾಡಿಸುತ್ತಿರುವ ಬಗ್ಗೆ ವಿಚಾರಿಸಿದರು. ಪಾಕ ಶಾಲೆಯ ಕೊಠಡಿ ಹಾಗೂ ಆಹಾರದ ಪಾತ್ರೆಗಳನ್ನು ಸ್ವಚ್ಛವಾಗಿ ಇಡುವಂತೆ ಸಿಬ್ಬಂದಿಗಳಿಗೆ ವಿಜುಸುಬ್ರಮಣಿ ಇದೇ ಸಂದರ್ಭ ಸೂಚನೆ ನೀಡಿದರು.
ಮಕ್ಕಳಿಗೆ ಕುಡಿಯಲು ಹಾಗೂ ಸ್ನಾನಕ್ಕೆ ಸೋಲಾರ್ ಬಿಸಿನೀರು ಬಳಸುತ್ತಿರುವುದಾಗಿ ಸಿಬ್ಬಂದಿಗಳು ಮಾಹಿತಿ ನೀಡಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ನೂತನ ಸಮವಸ್ತ್ರ ವಿತರಣೆ ಮಾಡಿದರಲ್ಲದೆ, ಎಲ್ಲ ಮಕ್ಕಳಿಗೂ ಖಡ್ಡಾಯವಾಗಿ ‘ಶೂ’ ಮತ್ತು ಚಪ್ಪಲಿಗಳ ವಿತರಣೆ ನಿಟ್ಟಿನಲ್ಲಿ ಬೇಡಿಕೆ ಸಲ್ಲಿಸಲು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.
ತಾನು ಆಗಿಂದಾಗ್ಗೆ ಭೇಟಿ ನೀಡುವುದಾಗಿಯೂ ನಿರಂತರ ಗೈರು ಹಾಜರಾಗಿರುವ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕುವಂತೆಯೂ ಯಾವುದೇ ಅವ್ಯವಹಾರ ನಡೆದಲ್ಲಿ, ವಿದ್ಯಾರ್ಥಿಗಳಿಗೆ ಅನ್ಯಾಯವಾದಲ್ಲಿ ಆಲೂರು ಸಿದ್ದಾಪುರ ವಾರ್ಡನ್ ನ್ನಂತೆ ಕರ್ತವ್ಯದಿಂದಲೇ ವಜಾ ಮಾಡಲಾಗುವುದು ಎಂದು ಅವರು ಶಿಕ್ಷಕರು, ಸಿಬ್ಬಂದಿಗಳಿಗೆ ಇದೇ ಸಂದರ್ಭ ಎಚ್ಚರಿಕೆ ನೀಡಿದರು.