ಮಂಡ್ಯ: ಇಲ್ಲಿನ ನಗರಸಭೆಗೆ ಬಡವರ ಅನುಕೂಲಕ್ಕೆಂದು ನೀಡಲಾಗಿರುವ ಹೆಣಸಾಗಿಸುವ ಮುಕ್ತಿರಥ ಎಂಬ ಹೆಸರಿನ ವಾಹನ ಉಪಯೋಗಕ್ಕೆ ಬಾರದೆ ಮೂಲೆ ಸೇರಿದ್ದು, ಇದಕ್ಕೆ ಸ್ಥಳೀಯ ಆ್ಯಂಬುಲೆನ್ಸ್ ಮಾಫಿಯಾ ಕಾರಣ ಎಂಬ ಆರೋಪ ಕೇಳಿಬಂದಿದೆ.
ವಿಧಾನಪರಿಷತ್ ಸದಸ್ಯರಾಗಿದ್ದ ಗೋ.ಮಧುಸೂದನ್ ಅವರ ಅಧಿಕಾರವಧಿಯಲ್ಲಿ ವಿಧಾನಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಹಲವು ಪುರಸಭೆ ಹಾಗೂ ನಗರಸಭೆಗಳಿಗೆ ಮುಕ್ತಿ ರಥ ಎಂಬ ವಾಹನವನ್ನು ನೀಡಲಾಗಿತ್ತು. ಅದರಂತೆ ಮಂಡ್ಯ ನಗರಸಭೆಗೂ ಜೂನ್ 14, 2014ರಂದು ನೀಡಲಾಗಿತ್ತು. ಅಲ್ಲದೆ ಖುದ್ದು ಗೋ.ಮಧುಸೂದನ್ ಅವರೇ ಚಾಲನೆ ನೀಡಿದ್ದರು. ಅವತ್ತಿನಿಂದ ಇಲ್ಲಿಯ ತನಕ ಲೆಕ್ಕ ಹಾಕಿದರೆ ಈ ಮುಕ್ತಿರಥದಲ್ಲಿ ಸಾವಿರಾರು ಶವಗಳನ್ನು ಸಾಗಿಸಬೇಕಾಗಿತ್ತು. ಆದರೆ ಸುಮಾರು 32 ತಿಂಗಳಿಗೆ ಈ ವಾಹನದಲ್ಲಿ ಸಾಗಿಸಿದ ಶವಗಳ ಸಂಖ್ಯೆ ಕೇವಲ 20 ಮಾತ್ರ. ಈಗ ಚಾಲಕರ ಸಮಸ್ಯೆ, ಇಂಧನ ಕೊರತೆಯ ನೆಪ ಹೇಳಿ ಅದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಪೋರ್ಸ್ ಕಂಪನಿಯ ಈ ಸುಸಜ್ಜಿತ ವಾಹನ ಧೂಳು ಹಿಡಿಯುತ್ತಿದೆ.
ಇವತ್ತು ಮುಕ್ತಿರಥ ಎಂದು ಕರೆಯಲ್ಪಡುವ ಈ ವಾಹನ ಸೂಕ್ತ ನಿರ್ವಹಣೆಯಲ್ಲಿದ್ದಿದ್ದರೆ ಬಡವರು ಕೇವಲ ಐನೂರೋ, ಸಾವಿರ ರೂಪಾಯಿ ವೆಚ್ಚದಲ್ಲಿ ಶವ ಸಾಗಿಸಬಹುದಾಗಿತ್ತು. ಆದರೆ ಇದು ಇದ್ದರೂ ಯಾರಿಗೂ ಉಪಯೋಗವಿಲ್ಲದಂತಾಗಿದೆ. ಹೀಗಾಗಿ ನಿಂತಲ್ಲೇ ನಿಂತು ಧೂಳು ಹಿಡಿಯುತ್ತಿದೆ. ಪರಿಣಾಮ ಜನ ಸಾವಿರಾರು ರೂಪಾಯಿ ನೀಡಿ ಖಾಸಗಿ ಆ್ಯಂಬುಲೆನ್ಸ್ ಗಳಲ್ಲಿ ಶವ ಸಾಗಿಸುವಂತಾಗಿದೆ.
ಖಾಸಗಿ ಆ್ಯಂಬುಲೆನ್ಸ್ ವಾಹನಗಳ ಮಾಫಿಯಾದಿಂದ ಈ ವಾಹನವನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪವಿದೆ. ಅದೆಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಹೊಡೆತ ಬಿದ್ದಿರುವುದಂತು ಬಡವರಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಕ್ತಿರಥದಲ್ಲಿ ಕಡಿಮೆ ವೆಚ್ಚದಲ್ಲಿ ಆಗುವ ಕೆಲಸಕ್ಕೆ ಇದೀಗ ಸಾವಿರಾರು ರೂಪಾಯಿಗಳನ್ನು ಬಡವರು ಖಾಸಗಿ ಆ್ಯಂಬುಲೆನ್ಸ್ ಗಳಿಗೆ ನೀಡಬೇಕಾಗಿದೆ. ನಗರಸಭೆ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣದಿಂದಾಗಿ ಸದುದ್ದೇಶಕ್ಕೆ ಬಳಕೆಯಾಗಬೇಕಾಗಿದ್ದ ವಾಹನವೊಂದು ಮೂಲೆ ಸೇರಿ ಧೂಳು ಹಿಡಿಯುವಂತಾಗಿದೆ.
ತಮ್ಮ ಅಧಿಕಾರವಧಿಯಲ್ಲಿ ನೀಡಿದ್ದ ವಾಹನಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯಾ ಎಂಬುದರ ಬಗ್ಗೆ ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಪರಿಶೀಲಿಸಿದರೆ ಅವರಿಗೆ ಶಾಕ್ ಆಗುವುದಂತು ಖಚಿತ. ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಅವು ಬಡವರಿಗೆ ಎಟುಕುತ್ತಿಲ್ಲ ಎಂಬುದಕ್ಕೆ ಮಂಡ್ಯದ ಮುಕ್ತಿರಥ ಸಾಕ್ಷಿಯಾಗಿದೆ. ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ಇಚ್ಚಾಸಕ್ತಿಯ ಕೊರತೆ ಎದ್ದು ಕಾಣುತ್ತಿದ್ದು, ಪರಿಣಾಮ ಬಡವರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಬೇಕಾಗಿದ್ದ ವಾಹನವೊಂದು ಧೂಳುಹಿಡಿಯುತ್ತಾ ಮೂಲೆ ಸೇರುವಂತಾಗಿದೆ.