ಮಂಡ್ಯ: ರಾಜ್ಯ ಬಜೆಟ್ ನಲ್ಲಿ ಸಾಲ ಮನ್ನಾ ಮಾಡಿಲ್ಲ ಎಂದು ನೊಂದು ಪ್ರತ್ಯೇಕ ಘಟನೆಯಲ್ಲಿ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಬಳಿಯ ನಾಟನಹಳ್ಳಿ ಗ್ರಾಮದಲ್ಲಿ ಚೆಲುವೇಗೌಡ (68) ಎಂಬ ರೈತ ಜಮೀನಿನ ಬೇಲಿಗೆ ಹಾಕಿದ್ದ ಬೆಂಕಿಗೆ ಹಾರಿ ಸಜೀವ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದಲ್ಲಿ ಪ್ರಕಾಶ್ (30) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಮೃತ ಚೆಲುವೇಗೌಡ ಸುಮಾರು ಮೂರೂವರೆ ಎಕರೆ ಜಮೀನು ಹೊಂದಿದ್ದು, ಈ ಜಮೀನಿನ ಬೇಸಾಯಕ್ಕಾಗಿ ಪಟ್ಟಣದ ಪಿಎಲ್ಡಿ ಬ್ಯಾಂಕ್ ನಲ್ಲಿ 1 ಲಕ್ಷ ರೂ. ಮತ್ತು ಲಕ್ಷಾಂತರ ರೂ. ಕೈ ಸಾಲ ಮಾಡಿದ್ದರು. ಬರಗಾಲದಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಬುಧವಾರ ಮಂಡನೆಯಾದ ರಾಜ್ಯ ಬಜೆಟ್ ನಲ್ಲಿ ಸಾಲ ಮನ್ನಾ ಅಗುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ರೈತ ಚೆಲುವೇಗೌಡ, ಬಜೆಟ್ ನಲ್ಲಿ ಸಾಲ ಮನ್ನಾ ಮಾಡುವುದಿಲ್ಲ ಎನ್ನುವುದನ್ನು ತಿಳಿದು ಮನನೊಂದು ತನ್ನ ಜಮೀನಿನ ಬಳಿಯ ಬೆಳೆ ರಕ್ಷಣೆಗೆಂದು ಹಾಕಿದ್ದ ಬೇಲಿಗೆ ಬೆಂಕಿ ಹಾಕಿ ನಂತರ ಅದೇ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಗಿರೀಶ್ ಅವರು ಅಗ್ನಿಶಾಮಕ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿ, ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದ ರೈತ ಚಲುವೇಗೌಡ ಅವರ ಶವವನ್ನು ಹೊರ ತೆಗೆದರು.
ಮತ್ತೊಂದು ಪ್ರಕರಣ
ಪ್ರಕಾಶ್ ಅವರು ತನ್ನ ತಾಯಿಯ ಹೆಸರಿನಲ್ಲಿದ್ದ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿಗಾಗಿ ಬೋರ್ವೆಲ್ ಕೊರೆಸಿದ್ದರು. ಆದರೆ, ವಿಫಲವಾಯಿತು. ಬೇಸಾಯ ಮತ್ತು ಜೀವನೋಪಾಯಕ್ಕಾಗಿ 5 ಲಕ್ಷ ರೂ.ನಷ್ಟು ಸಾಲ ಮಾಡಿದ್ದರು. ಸಾಲ ಮರು ಪಾವತಿಸಲಾಗದೆ ನೊಂದಿದ್ದ ಪ್ರಕಾಶ್, ಈ ಬಾರಿಯ ಬಜೆಟ್ ಸಾಲ ಮನ್ನಾ ಆಗುತ್ತದೆಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಾಲ ಮನ್ನಾ ಆಗದ ಹಿನ್ನೆಲೆಯಲ್ಲಿ ಜಮೀನಿನ ಬಳಿ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.