ಚಿಕ್ಕಮಗಳೂರು: ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವ ದಲಿತ ರೈತರಿಗೆ ದಾಖಲೆ ನೀಡದೇ ವಿಳಂಬ ಮಾಡುತ್ತಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಹಾಗೂ ದಲಿತ ಮಲ್ಲಯ್ಯನ ಭೂಮಿ ಕಬಳಿಸಲು ಹೊರಟಿರುವ ಪಿಡಿಓ ಸೋಮೇಗೌಡ ಹಾಗೂ ಪ್ರನಿಲ್ ಎಂಬವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ದಲಿತ ಜಾಗೃತಿ ವೇದಿಕೆ ಕಾರ್ಯಕರ್ತರು ನಗರದ ಆಜಾದ್ಪಾರ್ಕ್ಲ್ಲಿ ಧರಣಿ ನಡೆಸಿದರು.
ಸರಕಾರ ಭೂವಂಚಿತರಿಗೆ ಭೂಮಂಜೂರಾತಿ ನೀಡಲು ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಭೂಮಿ ಉಳ್ಳವರಿಗೆ ಬೇಕಾದಷ್ಟು ಪ್ರಮಾಣದ ಬೂಮಿ ಮಂಜೂರಾತಿ ಮಾಡಿ ದಾಖಲೆ ಒದಗಿಸುವ ಸರ್ಕಾರಿ ಅಧಿಕಾರಿಗಳು ಸಣ್ಣಪುಟ್ಟ ಹಿಡುವಳಿದಾರ ರೈತರಿಗೆ ದಾಖಲೆ ಒದಗಿಸಲು ಮೀನಾಮೇಷ ಏಣಿಸುತ್ತಿದ್ದಾರೆ. ಕಂಡ, ಕಂಡಲ್ಲಿ ಬೇಲಿ ಹಾಕಿ ಬಲಿಷ್ಟ ರಾಜಕೀಯ ಮತ್ತು ಶ್ರೀಮಂತ ವರ್ಗದವರು ರಾಜರೋಷವಾಗಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೋಣಗುಡಿಗೆ ಗ್ರಾಮದ ಸ.ನ>204ರಲ್ಲಿ ಸರ್ಕಾರಿ ಗೋಮಾಳದಲ್ಲಿ 3.20 ಎಕರೆ ಭೂಮಿ ಇದ್ದು, ಚಂಡಗೋಡು ವಾಸಿ ಮಲ್ಲಯ್ಯ 40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬದುತ್ತಿದ್ದಾರೆ. ಈ ಭೂಮಿ ಅಕ್ರಮ-ಸಕ್ರಮದಡಿ ಮಂಜೂರಾತಿ ಮಾಡಿಕೊಡಲು 1998-99ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸ್ಥಳಕ್ಕೆ ಅನೇಕ ಸಲ ಅಧಿಕಾರಿಗಳು ಸರ್ವೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಇನ್ನೂ ಮಂಜೂರಾತಿ ಮಾಡಿಲ್ಲ ಎಂದು ಧರಣಿ ನಿರತರು ದೂರಿದ್ದಾರೆ. ಕೂದುವಳ್ಳಿ ಪಂಚಾಯತ್ ಪಿಡಿಓ ಸೋಮೇಗೌಡ ಮತ್ತು ಈತನ ಸಂಬಂಧಿ ಪ್ರೆನಿಲ್ ಇವರ ಜಮೀನಿನ ಆಜುಬಾಜುದಾರರಾಗಿದ್ದು, ಮಲ್ಲಯ್ಯ ದಲಿತ ಎಂಬ ಕಾರಣಕ್ಕೆ ಕಿರುಕುಳ ನೀಡುತ್ತಿದ್ದಾರೆ. ಈ ಭೂಮಿಯನ್ನು ಮಲ್ಲಯ್ಯರಿಂದ ಕಬಳಿಸಲು ಸಂಚು ಹೂಡಿಕೊಂಡಿದ್ದಾರೆ. ಯಾವ ಅಧಿಕಾರಿಗಳಿಗೆ ಈ ಕುರಿತು ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.