ಚಾಮರಾಜನಗರ: ಯಾವುದೇ ಅಕ್ರಮಕ್ಕೆ ಆಸ್ಪದ ಮಾಡಿಕೊಡದೆ ಶಾಂತಿಯುತ, ಸುವ್ಯವಸ್ಥಿತ ಚುನಾವಣೆ ನಡೆಸುವ ಸಲುವಾಗಿ ಚುನಾವಣಾ ಆಯೋಗ ಗುಂಡ್ಲುಪೇಟೆ ವಿಧಾಸಭಾ ಕ್ಷೇತ್ರದ ಆಯಕಟ್ಟಿನ 11 ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪನೆ ಮಾಡಿದೆ.
ಚೆಕ್ಪೋಸ್ಟ್ ಗಳಲ್ಲಿ ಕಂದಾಯ, ಲೋಕೋಪಯೋಗಿ, ಅಬಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಿ ಬಿಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಚೆಕ್ಪೋಸ್ಟ್ ಗಳಲ್ಲಿ ಸೆಕ್ಟರ್ ಅಧಿಕಾರಿ, ಎರಡು ಪಾಳಿಗಳಲ್ಲಿ ಒಬ್ಬ ಸಹಾಯಕ ಸಬ್ಇನ್ಸ್ಪೆಕ್ಟರ್ ಹಾಗೂ ಇಬ್ಬರು ಸಿಬ್ಬಂದಿ ಇರಲಿದ್ದು, ಚೆಕ್ಪೋಸ್ಟ್ ಮೂಲಕ ಸಾಗುವ ಎಲ್ಲ ವಾಹನಗಳ ತಪಾಸಣೆಯನ್ನು ನಡೆಸಲಿದ್ದಾರೆ. ಅಷ್ಟೇ ಅಲ್ಲ ವಾಹನಗಳನ್ನು ತಪಾಸಣೆ ಮಾಡುವಾಗ ಅದರ ಚಿತ್ರೀಕರಣಗಳನ್ನು ಕೂಡ ಮಾಡಲಿದ್ದಾರೆ.
ಸ್ಥಾಪನೆ ಮಾಡಲಾಗಿರುವ ಚೆಕ್ಪೋಸ್ಟ್ ಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಹಿರೀಕಾಟಿ ಗೇಟ್ ಗೆ ಮೋಹನದಾಸ್, ಕುರುಬರಹುಂಡಿ ಸುಂದ್ರಮ್ಮ, ಬಂಡೀಪುರಕ್ಕೆ ನಿಜಲಿಂಗಸ್ವಾಮಿ, ಮದ್ದೂರು ಮಹದೇವು, ನಂಜೇದೇವನಪುರ ವಿಜಯಸಾರಥಿ, ತೆರಕಣಾಂಬಿ ಸೋಮಶೇಖರ್, ಹೆಗ್ಗವಾಡಿ ರಾಮಕೃಷ್ಣಯ್ಯ, ಬೊಮ್ಮನಹಳ್ಳಿ ಕೆ.ಆರ್.ಕುಲಕರ್ಣಿ, ಉಡಿಗಾಲ ವಿಜಯಸಾರಥಿ, ಕಾಳನಹುಂಡಿ ರಾಮಕೃಷ್ಣಯ್ಯ, ಕೆಬ್ಬೇಪುರ ಪುಟ್ಟಮಲ್ಲು ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಅನುಮಾನಾಸ್ಪದವಾಗಿ ಓಡಾಡುವುದು, ದಾಖಲೆಗಳಿಲ್ಲದೆ ಹಣ ಸಾಗಣೆ, ಅಕ್ರಮ ಮದ್ಯ ಸಾಗಣೆ ಮಾಡುವ ವಾಹನಗಳನ್ನು ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ.
ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಉಪಚುನಾವಣೆ ಜಿದ್ದಾಜಿದ್ದಿಗೆ ಅನುವು ಮಾಡಿಕೊಟ್ಟಿರುವುದಲ್ಲದೆ, ಅಕ್ರಮ ನಡೆಯುವ ಸಾಧ್ಯತೆ ಇರುವುದಿಂದ ಕಳೆದ ಚುನಾವಣೆಯಲ್ಲಿ ಒಂಬತ್ತು ತಪಾಸಣಾ ಕೇಂದ್ರಗಳನ್ನು ರಚಿಸಿದ್ದರೆ ಈ ಬಾರಿ ಹನ್ನೊಂದಕ್ಕೇರಿಸಲಾಗಿದೆ.
ಈಗಾಗಲೇ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆ ಹೊಂದಿರುವ ಪ್ರದೇಶದತ್ತ ನಿಗಾಯಿಡಲಾಗಿದ್ದು ಪೊಲೀಸ್ ಪಡೆಯನ್ನು ನಿಯೋಜನೆ ಮಾಡಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 250 ಮತಗಟ್ಟೆಗಳ ಪೈಕಿ 37 ಸೂಕ್ಷ್ಮ, 42 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಈಗಾಗಲೇ 5 ಕೆಎಸ್ಆರ್ಪಿ ತುಕಡಿಗಳು, 12 ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳು, ವಿವಿಧ ಠಾಣೆಗಳ 72 ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆಯೇ ವಿವಿಧೆಡೆಗಳಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವ ಸಾಧ್ಯತೆಯಿದೆ.