ಚಾಮರಾಜನಗರ: ದೇಶದಾದ್ಯಂತ ಸ್ವಚ್ಛತಾ ಆಂದೋಲನ ನಡೆಸುತ್ತಾ ಸ್ವಚ್ಛತೆಯ ಮಂತ್ರ ಪಠಿಸುತ್ತಿದ್ದರೆ, ಜಿಲ್ಲೆಯ ಯಳಂದೂರು ಪಟ್ಟಣದ ದೇವಾಂಗ ಬಡಾವಣೆಯ ಶ್ರೀರಾಮಮಂದಿರದ ಹಿಂಭಾಗ ಕಸ ವಿಲೇವಾರಿಯಾಗದೇ ತುಂಬಿ ತುಳುಕುತ್ತಿದ್ದರೂ ಸ್ಥಳೀಯ ಪಟ್ಟಣ ಪಂಚಾಯಿತಿ ಮಾತ್ರ ಸಂಬಂಧವೇ ಇಲ್ಲ ಎಂಬಂತೆ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸುತ್ತಿದೆ.
ಬೇಸಿಗೆ ಬರುತ್ತಿದ್ದಂತೆಯೇ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತಿದ್ದು, ಇವುಗಳನ್ನು ತಡೆಯಬೇಕಾದರೆ ಶುಚಿತ್ವ ಅಗತ್ಯ. ಆದರೆ ಪಟ್ಟಣ ಪಂಚಾಯಿತಿ ತ್ಯಾಜ್ಯವನ್ನು ತೆರವುಗೊಳಿಸದೆ ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ ರೋಗ ಹರಡಲು ಪ.ಪಂ ಅನುವು ಮಾಡಿಕೊಡುತ್ತಿದೆಯಾ ಎಂಬ ಅನುಮಾನ ಹುಟ್ಟುತ್ತಿದೆ.
ಈಗಾಗಲೇ ಕಸಸಂಗ್ರಹವಾಗಿದ್ದು, ಇಲ್ಲಿರುವ ಕಸವನ್ನು ಹಂದಿ, ದನಕರುಗಳು, ನಾಯಿಗಳು ಹರಡಿ ಗಬ್ಬೆಬ್ಬಿಸುತ್ತಿದ್ದು, ಇದರಿಂದ ಕ್ರಿಮಿಕೀಟಗಳ ಅವಾಸಸ್ಥಾನವಾಗಿ ಮಾರ್ಪಡಾಗುತ್ತಿದೆ. ಈ ತ್ಯಾಜ್ಯ ಕೊಳೆತು ದುರ್ವಾಸನೆ ಬೀರುತ್ತಿರುವುದರಿಂದ ಜನ ಮೂಗುಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಇಲ್ಲಿ ವಾಸಿಸುವ ಜನರ ಪಾಡಂತು ಹೇಳತೀರದಾಗಿದೆ. ಪ್ರತಿದಿನವೂ ಪಟ್ಟಣ ಪಂಚಾಯಿತಿಗೆ ಹಿಡಿಶಾಪ ಹಾಕುತ್ತಾ ಕಳೆಯುತ್ತಿದ್ದಾರೆ. ಇನ್ನು ದೇವಾಲಯ ಬಳಿಯೇ ಕಸದ ರಾಶಿಯಿರುವುದರಿಂದ ದೇವಾಲಯಕ್ಕೆ ಬರುವ ಭಕ್ತರಿಗೂ ಕಿರಿಕಿರಿಯಾಗುತ್ತಿದೆ. ದೇವಾಲಯದಲ್ಲಿ ಒಂದಷ್ಟು ಹೊತ್ತು ಇದ್ದು ಹೋಗೋಣ ಎಂದು ಭಕ್ತರು ಬಂದರೆ ಕಸದ ರಾಶಿಯಿಂದ ಬರುವ ದುರ್ವಾಸನೆ ಹೆಚ್ಚು ಹೊತ್ತು ಇಲ್ಲಿರದಂತೆ ಮಾಡಿಬಿಡುತ್ತದೆ.
ಕಸ ವಿಲೇವಾರಿ ಮಾಡದೆ ಇರುವುದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ.