ಮಡಿಕೇರಿ: ಅರಣ್ಯದಂಚಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಮಂದಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರ ವಿಶೇಷ ಅನುದಾನ ಬಳಕೆ ಮಾಡಿಕೊಳ್ಳಲಾಗುವುದೆಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ತಿಳಿಸಿದ್ದಾರೆ.
ಚೆಂಬು ಪಂಚಾಯಿತಿಯ ಕಟ್ಟಪಳ್ಳಿ, ಕುದುರೆಪಾಯ ಹಾಗೂ ಪೆರಾಜೆ ಪಂಚಾಯ್ತಿಯ ನಿಡ್ಯಮಲೆ, ಕುಂಡಾಡು ಗ್ರಾಮಗಳಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಭೇಟಿ ನೀಡಿ ಕಾಮಗಾರಿಗಳ ಅಗತ್ಯತೆಯನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು. ಪ್ರತಿ ಗ್ರಾಮಕ್ಕೆ ತಲಾ 20ಲಕ್ಷ ರೂ. ಗಳಂತೆ ಒಟ್ಟು 80ಲಕ್ಷ ರೂ.ಗಳನ್ನು ರಸ್ತೆ ಕಾಮಗಾರಿಗಾಗಿ ವಿನಿಯೋಗಿಸಲಾಗುವುದು. ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಅವರು ಸಧ್ಯದಲ್ಲಿಯೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು.
ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ಸಾಮಾನ್ಯನಿಗೂ ತಲುಪಬೇಕು ಎನ್ನುವುದು ಕಾಂಗ್ರೆಸ್ ನ ಸಿದ್ಧಾಂತ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಈಗಾಗಲೇ 30ಗ್ರಾಮಗಳನ್ನು ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ 296 ಗ್ರಾಮಗಳಿಗೂ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಮೈನಾ ತಿಳಿಸಿದರು. ಈ ಸಂದರ್ಭ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪೆರುಮಂಡ ಸುರೇಶ್, ಅಧ್ಯಕ್ಷ ಬಂಗಾರು ಕೋಡಿ ಪುರುಷೋತ್ತಮ, ಗೋಪಾಲ ಕುಳಂಗಾಯ, ಜನಾರ್ಧನ ನಾಯಕ, ನಿಡ್ಯಮಲೆ ಗೋಪಾಲಕೃಷ್ಣ, ಗಂಗಾಧರ ಎನ್.ಆರ್, ಕುಂಡಾಡು ನಾಗೇಶ್ ಶಶಿನಾಯಕ, ಕೆ.ಸಿ.ಉಮೇಶ್, ಚೆಂಬು ಗ್ರಾಮದ ಕಾಂಗ್ರೆಸ್ ಮುಖಂಡರಾದ ಹೊಸೂರು ರವಿರಾಜ್, ನಡುಬೆಟ್ಟ ಚಂಗಪ್ಪ, ಸೋಮಯ್ಯ ನಾಯಕ, ಫಕೀರಪ್ಪ, ಪನೆಡ್ಕ ಜಯಪ್ರಕಾಶ್, ಕೂಂಪುಳಿ ಮೋಹನ್ ಸೇರಿದಂತೆ ಪ್ರಮುಖರು ಹಾಜರಿದ್ದರು.