ಮೂಡಿಗೆರೆ: ಆಕಾಶವೇ ಚಪ್ಪರ.ಪ್ಲಾಸ್ಟಿಕ್ ಹಾಸುವೇ ಮೈಮೇಲಿನ ಹೊದಿಕೆ.ಹೇಮಾವತಿ ನದಿಯ ದಡವೇ ಮಲಗುವ ಮಂಚ. ಓರ್ವ 7 ವರ್ಷದ ಹೆಣ್ಣು ಮಗುವಿನೊಂದಿಗೆ ಅಪ್ಪನ ಆಸರೆ. ಇದು ಬಣಕಲ್ನ ಪಶುವೈಧ್ಯ ಆಸ್ಪತ್ರೆಯ ಸಮೀಪ ಕಂಡು ಬರುವ ಗುಡಿಸಲ ನಿರ್ಗತಿಕ ಕುಟುಂಬದ ಚಿತ್ರಣ. ಇಂತಹ ಕುಟುಂಬದ ಸಹಾಯಕ್ಕೆ ಮೂಡಿಗೆರೆ ತಹಸೀಲ್ದಾರ್ ಡಿ.ನಾಗೇಶ್ ಬಣಕಲ್ಗೆ ಭೇಟಿ ನೀಡಿ ಕುಟುಂಬದ ಮಾಹಿತಿ ಕಲೆ ಹಾಕಿ ಅಧಿಕಾರಿಗಳಿಗೆ ನಿವೇಶನ ನೀಡುವಂತೆ ಸೂಚಿಸಿದ್ದಾರೆ.
ಫೆ.18ರಂದು ಮಳೆಗೆ ಲಕ್ಷ್ಮಣನ ಗುಡಿಸಲ ಮನೆ ನೆಲಕ್ಕೆ ಉರುಳಿದೆ. ಗುಡಿಸಲು ಉರುಳುವಾಗ ಮಗಳು ಶಾಂಭವಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯೂ ಕೊಡಿಸಲಾಗಿದೆ. ದಿಕ್ಕು ದೆಸೆಯಿಲ್ಲದ ಈ ಕುಟುಂಬಕ್ಕೆ ಮಗುವಿನ ತಾಯಿ ಯಶೋಧ ಕೂಡ 5 ವರ್ಷದ ಹಿಂದೆ ತೀರಿದ್ದಾರೆ. ಮೈಕೊರೆಯುವ ಚಳಿಯಲ್ಲಿ ಕೂಲಿ ಮಾಡುವ ಲಕ್ಷ್ಮಣ ತನ್ನ ಚಿಕ್ಕ ಮಗಳು ಶಾಂಭವಿಯನ್ನು ಗುಡಿಸಲಿನಲ್ಲಿಟ್ಟು ಸಾಕುತ್ತಿದ್ದಾರೆ. ಅಪ್ಪ ಕೂಲಿ ಕೆಲಸಕ್ಕೆ ಹೋದರೆ ಮಗಳು ಒಬ್ಬಂಟಿ. ಗುಡಿಸಲು ಪರಿಸರ ನೋಡಿದರೆ ಗಿಡಗಂಟೆ ತುಂಬಿ ಹಾವು ಚೇಳಿನ ಜಾಗ. ಅದರಲ್ಲಿ ವಾಸಿಸುವ ಶಾಂಭವಿ ಪ್ರಶ್ನೆ ಕೇಳಿದರೆ ತಕ್ಷಣ ಉತ್ತರ ಕೊಡುವ ಪ್ರತಿಭಾವಂತೆ. ಬಣಕಲ್ ಸರಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದು ಈಗ ಪರೀಕ್ಷೆ ಬರೆಯುತ್ತಿದ್ದಾಳೆ.
ಸರಕಾರದ ಎಲ್ಲಾ ಗುರುತಿನ ಚೀಟಿ ಇದ್ದರೂ 14 ವರ್ಷಗಳಾದರೂ ವಸತಿ ನಿವೇಶನ ಕೊಡದಿರುವುದು ದುರದೃಷ್ಟಕರ ವಿಷಯ. ಸ್ಥಳಕ್ಕೆ ಮೂಡಿಗೆರೆ ತಹಸೀಲ್ದಾರ್ ಡಿ.ನಾಗೇಶ್ ಬೇಟಿ ನೀಡಿದರು. ಪ್ಲಾಸ್ಟಿಕ್ ಡೇರೆ ಹಾಕಿದ್ದನ್ನು ಕಂಡು ತಹಸೀಲ್ದಾರ್ ಡಿ.ನಾಗೇಶ್ ಗದ್ಗತಿತರಾಗಿ ಕಣ್ಣೀರು ಹಾಕಿದರು. ಜನರಿಗೆ ಸರಕಾರದಿಂದ ಇಷ್ಟೊಂದು ಸೌಲಭ್ಯಗಳಿರುವಾಗ ಈ ಕುಟುಂಬದ ಅವ್ಯವಸ್ಥೆಗೆ ಮರುಗಿದರು. ಕೂಡಲೇ ತಾಪಂ ಇಓ ಗುರುದತ್, ಬಣಕಲ್ ಪಿಡಿಓ ಚಂದ್ರಾವತಿಯವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ನಿವೇಶನದ ಬಗ್ಗೆ ವಿಚಾರಿಸಿದರು. ಸೈಟುಗಳು ಮಂಜೂರಾದರೆ ನಿವೇಶನ ಕೊಡುತ್ತೇವೆ ಎಂದು ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್ ಸ್ಥಳಕ್ಕೆ ಬಂದು ತಿಳಿಸಿದರು.