ಹಾಸನ: ಜಾತ್ರೆ ವೇಳೆ ರೂಢಿಯಲ್ಲಿರುವ ಸಿಡಿ ಆಡಿಸುವ ಪದ್ಧತಿಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿರುವ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ತಪ್ಪಿದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೊಳನರಸೀಪುರ ತಾಲೂಕು ಹಳೇಕೋಟೆ ಹೋಬಳಿಯ ಹರಿಹರಪುರದ ಉಡುಸಲಮ್ಮದೇವಿಯ ಜಾತ್ರಾಮಹೋತ್ಸವ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ನಡೆಯುತ್ತಿದ್ದು, ಈ ಹಬ್ಬದಲ್ಲಿ ಸುತ್ತಮುತ್ತಲ 7 ಗ್ರಾಮಗಳ ಜನ ಸೇರುತ್ತಾರೆ. ಇಲ್ಲಿ ಸಂಪ್ರದಾಯದ ಹೆಸರಿನಲ್ಲಿ ಮೂಢನಂಬಿಕೆಯ ಭಾಗವಾಗಿ ಹರಿಹರಪುರದ ಪಕ್ಕದಲ್ಲಿರುವ ಜಾಕೇನಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ದಲಿತ ಕುಟುಂಬಗಳ ಜನರ ಬೆನ್ನು ಹಾಗೂ ಬಾಯಿಗೆ ಸಲಾಕೆಯನ್ನು ಚುಚ್ಚಿ ದೊಡ್ಡ ಕಂಬಕ್ಕೆ ಏರಿಸಿ ಸುತ್ತಿಸುವ ಸಿಡಿ ಎಂಬ ಅನಿಷ್ಠ ಪದ್ಧತಿಯನ್ನು ಆಚರಿಸಲಾಗುತ್ತಿದ್ದು ಇದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಇನ್ನು ಮಹಿಳೆಯರು ಬಾಯಿಗೆ ಬೀಗ ಚುಚ್ಚಿಸಿಕೊಂಡು ಅನಿಷ್ಠ ಆಚರಣೆ ಮಾಡಲಾಗುತ್ತದೆ. ಇಂತಹ ಆಚರಣೆಯಲ್ಲಿ ಕೆಳಗೆ ಬಿದ್ದು ಸಾವು ನೋವುಗಳು ಕೂಡ ಸಂಭವಿಸಿದೆ. ಹಿಂದೆ ಬೇಲೂರು ತಾಲೂಕು ಹೆಬ್ಬಾಳ ಗ್ರಾಮದ ಜಾತ್ರೆಯಲ್ಲಿ ಸಿಡಿ ಆಡುವಾಗ ವ್ಯಕ್ತಿ ಇರುವ ಕಂಬ ಮುರಿದು ಸಾವನಪ್ಪಿದ ಘಟನೆ ನಡೆದಿದೆ. ಹೀಗಿರುವಾಗ ದಲಿತರನ್ನು ಗುರಿಯಾಗಿಸಿಕೊಂಡು ನಡೆಸುವ ಪದ್ಧತಿಯನ್ನು ತಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಕೆಡಿಪಿ ಸದಸ್ಯರು ಹಾಗೂ ದಲಿತ ಹಿರಿಯ ಮುಖಂಡರು ನಾರಾಯಣದಾಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್.ಎನ್. ಮಲ್ಲಪ್ಪ, ಅಂಬುಗ ಮಲ್ಲೇಶ್, ದಲಿತ ಮಾನವ ಹಕ್ಕುಗಳ ವೇದಿಕೆ ಜಿಲ್ಲಾಧ್ಯಕ್ಷ ಮರಿಜೋಸೆಫ್, ಆರ್ಪಿಐ ಸತೀಶ್ ಇದ್ದರು.