ಮಡಿಕೇರಿ: ಕಾಸರಗೋಡಿನ ಚೂರಿ ಗ್ರಾಮದಲ್ಲಿ ನಡೆದ ಮದ್ರಸದ ಅಧ್ಯಾಪಕ ರಿಯಾಜ್ ಮುಸ್ಲಿಯಾರ್ ಹತ್ಯಾ ಪ್ರಕರಣವನ್ನು ಖಂಡಿಸಿ ಮಾ.25 ರಂದು ನಾಪೋಕ್ಲುವಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಾಲ್ಕುನಾಡು ಮುಸ್ಲಿಂ ಜಮಾಅತ್ ನಿರ್ಧರಿಸಿದೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಜಮಾಅತ್ ಪ್ರಮುಖರಾದ ಪಿ.ಎಂ. ಖಾಸಿಂ ಹತ್ಯಾ ಪ್ರಕರಣ ಅಮಾನವೀಯ ಕೃತ್ಯವೆಂದು ವಿಷಾದಿಸಿದರು. ಶನಿವಾರ ಬೆಳಗ್ಗೆ 10.30 ರಿಂದ 11.30 ಗಂಟೆಯವರೆಗೆ ನಾಪೋಕ್ಲು ಬಂದ್ ಮಾಡಿ ಪ್ರತಿಭಟನಾ ಸಭೆ ನಡೆಸಲಾಗುವುದೆಂದರು. ರಿಯಾಜ್ ಮುಸ್ಲಿಯಾರ್ ಅವರ ಸಾವಿನಿಂದಾಗಿ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಕರ್ನಾಟಕ ಹಾಗೂ ಕೇರಳ ರಾಜ್ಯ ಸರ್ಕಾರಗಳು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ಮಸೀದಿ ಹಾಗೂ ಮದ್ರಸಗಳಲ್ಲಿ ಧರ್ಮೋಪದೇಶ ಮಾಡುವ ಅಧ್ಯಾಪಕರುಗಳಿಗೆ ಕರ್ನಾಟಕ ರಾಜ್ಯದಲ್ಲಿ ಕೂಡ ಸೂಕ್ತ ರಕ್ಷಣೆಯ ಅಗತ್ಯವಿದೆ ಎಂದರು. ರಿಯಾಜ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿ ದುಷ್ಕರ್ಮಿಗಳ ಬಂಧನಕ್ಕೆ ಕೇರಳ ಸರ್ಕಾರದ ಮೇಲೆ ಒತ್ತಡ ಹೇರಬೇಕು ಮತ್ತು ಕೊಡಗಿನ ಮಸೀದಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮ ಗುರುಗಳಿಗೆ ಸೂಕ್ತ ರಕ್ಷಣೆ ನೀಡಬೆೇಕೆಂದು ಪಿ.ಎಂ. ಖಾಸಿಂ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರಮುಖರಾದ ಎಂ.ಬಿ. ಹಮೀದ್, ಅಬ್ದುಲ್ ಅಜೀಜ್, ಹಂಸ ಕೊಟ್ಟಮುಡಿ ಹಾಗೂ ಮೊಹಮ್ಮದ್ ಹನೀಫ್ ಅವರು, ಧರ್ಮ ಬೋಧಕರ ಮೇಲಿನ ದಾಳಿಯು ಮಾನವೀಯತೆಯ ಮೇಲೆ ನಡೆದ ದಾಳಿಯಾಗಿದೆ ಎಂದರು. ನಾಪೋಕ್ಲುವಿನಲ್ಲಿ ನಡೆಯುವ ಪ್ರತಿಭಟನಾ ಸಭೆಯಲ್ಲಿ ಸುತ್ತಮುತ್ತಲ ಜಮಾಅತ್ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.