ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರುತ್ತಿದ್ದು, ಬಿಜೆಪಿಯ ಘಟಾನುಘಟಿ ನಾಯಕರೆಲ್ಲ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಈ ನಡುವೆ ಕ್ಷೇತ್ರದ ಬರಗಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರ ಸಭೆ ನಡೆಸಲಾಗಿದ್ದು ಇದರಲ್ಲಿ ಭಾಗವಹಿಸಿದ ನಾಯಕರು ಕಾಂಗ್ರೆಸ್ ನೇತೃತ್ವದ ಸರ್ಕಾರ ಮತ್ತು ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ ನಾವು ಒಂದು ಮಡಿಕೆ ಖರೀದಿ ಮಾಡಬೇಕಿದ್ದರೆ, ತರಕಾರಿ ಕೊಂಡುಕೊಳ್ಳಬೇಕಿದ್ದರೆ ಮೂರು ಸಾರಿ ಯೋಚನೆ ಮಾಡುತ್ತೇವೆ. ಓಟು ಕೊಡುವುದು ನೋಟಿಗಲ್ಲ, ಓಟು ಕೊಡುವುದು ಹೆಂಡಕ್ಕಲ್ಲ. ಇದನ್ನು ಅರ್ಥಮಾಡಿಕೊಂಡು ನ್ಯಾಯದ ಮತಹಾಕಿ ಬೇಡವಾದ ಕಾರ್ಖಾನೆ ಸ್ಥಾಪಿಸಿ ಅಕ್ಕಪಕ್ಕದ ರೈತರಿಗೆ ಮತ್ತು ಪರಿಸರಕ್ಕೆ ಹಾನಿ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದ ಅವರು, ಕೇಂದ್ರ ಸರಕಾರ ನೋಟು ಬ್ಯಾನ್ ಮಾಡಿದ ನಂತರ ಬಡವ ಅಕ್ರಮ ಹಣ ಮಾಡಿದ್ದ ಶ್ರೀಮಂತನನ್ನು ನೋಡಿ ನಗುವಂತಾಯಿತು ಎಂದ ಅವರು ಮತದಾರರನ್ನು ಕುರಿತು ಇಡೀ ದೇಶಕ್ಕೆ ಬೇಡವಾಗಿರುವ ಕಾಂಗ್ರೆಸ್ ನಿಮಗೆ ಬೇಕೆ? ಎಂದು ರವಿ ಪ್ರಶ್ನಿಸಿದರು.
ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾತನಾಡಿ, ನೀವು ಹಿಂಸಾಚಾರ ಮಾಡಿ ಬುಲೆಟ್ ಮೂಲಕ ಉತ್ತರ ನೀಡಬೇಕಾಗಿಲ್ಲ. ಚುನಾವಣೆಯಲ್ಲಿ ಬ್ಯಾಲೆಟ್ ಮೂಲಕ ಉತ್ತರ ನೀಡಿದರೆ ಸಾಕು. ರೈತರ ಸಮಾಧಿ ಮೇಲೆ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ದೂರಿದರು. ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಮಹದೇವ್ ಪ್ರಸಾದ್ ಅವರಿಗೆ ಕುಟುಂಬ ರಾಜಕಾರಣದಲ್ಲಿ ನಂಬಿಕೆಯಿರಲಿಲ್ಲ. ಕಾಂಗ್ರೆಸ್ ನಾಯಕರು ಬಲವಂತವಾಗಿ ಗೀತಾ ಮಹದೇವ್ ಪ್ರಸಾದ್ ಅವರಿಗೆ ಪಟ್ಟ ಕಟ್ಟಿದ್ದಾರೆ. ಆದರೆ ಗೆಲುವು ಬಿಜೆಪಿ ಪರವಾಗಿರಲಿದೆ ಎಂದರು.
ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಮಾತನಾಡಿ ಮಹಿಳೆಯರ ಬಗ್ಗೆ ಹೇಳಿಕೆ ನೀಡಬೇಕಿದ್ದರೆ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಎಚ್ಚರ ವಹಿಸಬೇಕು. ನಮಗೂ ಮಾತನಾಡಲು ಬರುತ್ತದೆ. ಆದರೆ ಮಾತು ತಪ್ಪಿ ಏನೇನು ಹೇಳುವುದಿಲ್ಲ. ಮಹಿಳೆಯರನ್ನು ಗೌರವ ಭಾವದಿಂದ ನೋಡುವುದನ್ನು ಕಲಿತುಕೊಳ್ಳಿ. ಇಲ್ಲವಾದರೆ ಮಹಿಳೆಯರಿಂದ ಛೀಮಾರಿಗೆ ಗುರಿಯಾಗುತ್ತೀರಿ ಎಂದು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು. ಸಭೆಯುದ್ದಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಕ್ಷದ ಮುಖಂಡರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು ಕಂಡು ಬಂತು.