ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುಮಾರು 23 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಆದಿ ದ್ರಾವಿಡ ಸಮುದಾಯದಲ್ಲಿ ಒಡಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದು, ಇದಕ್ಕೆ ಸಮಾಜ ಬಾಂಧವರು ಕಿವಿಗೊಡದೆ ನೋಂದಣಿಯಾಗಿರುವ ಕೊಡಗು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದಲ್ಲಿ ಗುರುತಿಸಿಕೊಳ್ಳುವಂತೆ ಸಂಘದ ಜಿಲ್ಲಾಧ್ಯಕ್ಷರಾದ ಎಸ್. ಜನಾರ್ಧನ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿದ್ರಾವಿಡ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ 2011 ರಲ್ಲಿ ಸಂಘವನ್ನು ಸ್ಥಾಪಿಸಲಾಯಿತು. ಆದರೆ, ಇತ್ತೀಚೆಗೆ ಸೋಮಪ್ಪ ಎಂಬುವವರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಆದಿ ದ್ರಾವಿಡ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಜನಾಂಗ ಬಂಧುಗಳು ಇವರ ಮಾತಿಗೆ ಮರುಳಾಗಿ ಮೋಸ ಹೋಗಬಾರದೆಂದು ಕರೆ ನೀಡಿದರು.
ಸಂಘಟನೆಯು ಸಮುದಾಯದ ಬಂಧುಗಳ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಗ್ರಾಮ ಸಮಿತಿಯನ್ನು ಕೂಡ ರಚಿಸಲಾಗಿದೆ. ಸಧ್ಯದಲ್ಲೆ ಜಿಲ್ಲಾ ಮಟ್ಟದ ಸಭೆ ನಡೆಯಲಿದ್ದು, ಏ.16 ರಂದು ಸಿದ್ದಾಪುರದಲ್ಲಿ ಡಾ.ಅಂಬೆೇಡ್ಕರ್ ಜಯಂತಿ ಆಚರಿಸಲಾಗುವುದು ಎಂದರು. ಮೇ ತಿಂಗಳಿನಲ್ಲಿ ಆದಿ ದ್ರಾವಿಡರಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗುವುದೆಂದು ಜನಾರ್ಧನ ಮಾಹಿತಿ ನೀಡಿದರು.
ಉಪಾಧ್ಯಕ್ಷ ಜಿ.ಕುಶಾಲಪ್ಪ ಮಾತನಾಡಿ, ಸೋಮಪ್ಪ ಎಂಬುವವರು ಸಮುದಾಯದ ಮಂದಿಯಿಂದ ನೋಂದಣಿ ಶುಲ್ಕವೆಂದು 500 ರೂ. ಸಂಗ್ರಹಿಸುತ್ತಿದ್ದು, ಇದು ನಿಯಮಬಾಹಿರ ಚಟುವಟಿಕೆಯಾಗಿದೆ ಎಂದು ಆರೋಪಿಸಿದರು. ನೋಂದಾವಣೆಗೊಂಡಿರುವ ನಮ್ಮ ಸಂಘಟನೆ ಕೇವಲ 135 ರೂ. ಶುಲ್ಕವನ್ನು ಮಾತ್ರ ಸಂಗ್ರಹಿಸುತ್ತಿದೆ. ಆದ್ದರಿಂದ ಆದಿ ದ್ರಾವಿಡರು ನೋಂದಾಯಿತ ಸಂಘಟನೆಯೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು. ಕೊಡಗು ಜಿಲ್ಲೆಯಲ್ಲಿ 23 ಸಾವಿರಕ್ಕು ಅಧಿಕ ಮಂದಿ ಆದಿ ದ್ರಾವಿಡರಿದ್ದರೂ ರಾಜಕೀಯವಾಗಿ ಸೂಕ್ತ ಸ್ಥಾನಮಾನ ದೊರಕುತ್ತಿಲ್ಲ. ಅಲ್ಲದೆ, ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಕೂಡ ದೊರೆಯುತ್ತಿಲ್ಲ ಎಂದು ಬೆೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಎನ್.ಪಿ.ಓಂಕಾರಪ್ಪ ಉಪಸ್ಥಿತರಿದ್ದರು.