ಮಡಿಕೇರಿ: ಕೊಡಗಿನ ಪ್ರವಾಸಿ ತಾಣಗಳಲ್ಲೊಂದಾದ ನಾಲ್ಕುನಾಡು ಅರಮನೆ ಕಕ್ಕಬೆ ಬಳಿಯ ಯವಕಪಾಡಿಯ ತೋಟ, ಕಾಡಿನ ನಡುವೆ ಇದೆ, ರಾಜರ ಕಾಲದ ಈ ಅರಮನೆಯನ್ನು ನೋಡಲು ಮತ್ತು ನಿಸರ್ಗ ಸೌಂದರ್ಯ ಸವಿಯಲು, ಚಾರಣಕ್ಕಾಗಿ ಪ್ರವಾಸಿಗರು ಇತ್ತ ಬರುತ್ತಾರೆ. ಆದರೆ ಕೆಲವು ದಿನಗಳಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದರಿಂದ ಸ್ಥಳೀಯ ಜನರು ಸೇರಿದಂತೆ ಪ್ರವಾಸಿಗರು ಬೆಚ್ಚಿ ಬಿದ್ದಿದ್ದರು.
ಕಾಫಿ ತೋಟದಲ್ಲಿ ಸೇರಿಕೊಂಡಿದ್ದ ಕಾಡಾನೆಗಳು ಎಲ್ಲೆಂದರಲ್ಲಿ ಅಡ್ಡಾಡುತ್ತಾ ಭಯದ ವಾತಾವರಣವನ್ನು ಸೃಷ್ಟಿಸಿದ್ದವು. ಅಷ್ಟೇ ಅಲ್ಲದೆ ತೋಟದ ನಡುವೆಯೇ ಹೆಣ್ಣಾನೆಯೊಂದು ಮರಿಗೆ ಜನ್ಮ ನೀಡಿತ್ತು ಹೀಗಾಗಿ ಅವುಗಳನ್ನು ಕಾಡಿಗೆ ಅಟ್ಟುವುದು ಸುಲಭದ ಕೆಲಸವಾಗಿರಲಿಲ್ಲ. ಇನ್ನು ತೋಟದಲ್ಲಿ ಕೆಲಸಗಾರರಿಗೆ ನಿರ್ಮಿಸಿದ್ದ ಲೈನ್ ಮನೆಗಳನ್ನು ಆನೆಗಳು ಜಖಂಗೊಳಿಸಿದ್ದವು. ಈ ವ್ಯಾಪ್ತಿಯಲ್ಲಿ ಹೆಚ್ಚು ಕಾಫಿ ತೋಟವಿದ್ದು ಕೆಲಸ ಮಾಡಲು ಮತ್ತು ತೋಟಕ್ಕಾಗಿ ಹಾದು ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳು ಶಾಲೆಗೆ ಹೋಗಿ ಬರಲು ಹೆದರುವಂತಾಗಿತ್ತು. ತಡಿಯಂಡಮೋಳ್ ಬೆಟ್ಟ ಚಾರಣಕ್ಕೆ ಮತ್ತು ನಾಲ್ಕುನಾಡು ಅರಮನೆ ವೀಕ್ಷಣೆಗೆ ಬರಲು ಪ್ರವಾಸಿಗರು ಭಯದಿಂದ ಇತ್ತ ಸುಳಿದಿರಲಿಲ್ಲ.
ಸುಮಾರು 11 ಆನೆಗಳು ಬೀಡುಬಿಟ್ಟಿದ್ದರಿಂದ ಅವುಗಳನ್ನು ಕಾಫಿ ತೋಟದಿಂದ ಹೊರಗೆ ಅಟ್ಟುವುದು ಸುಲಭದ ಕೆಲಸವಾಗಿರಲಿಲ್ಲ. ಆದರೂ ಅರಣ್ಯ ಇಲಾಖೆ ಶ್ರಮ ವಹಿಸಿ ಸಮೀಪದ ಪಡಿನಾಲ್ಕು ನಾಡು ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸುತ್ತಮುತ್ತಲಿನ ಜನರು, ಪ್ರವಾಸಿಗರು ನೆಮ್ಮದಿ ಪಡುವಂತಾಗಿದೆ.
ಬೇಸಿಗೆಯ ದಿನಗಳಲ್ಲಿ ಹಲಸಿನ ಹಣ್ಣು ಬಿಡುವುದರಿಂದ ಆನೆಗಳು ಅರಣ್ಯದಿಂದ ಹಲಸಿನ ಹಣ್ಣು ಹುಡುಕಿಕೊಂಡು ತೋಟಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಹಲವರು ಆನೆಗಳ ಕಾಟ ತಡೆಯಲಾರದೆ ತೋಟದಲ್ಲಿರುವ ಹಲಸಿನ ಮರದ ಫಸಲನ್ನು ಮಿಡಿಯಾಗಿರುವಾಗಲೇ ಕಡಿದು ನಾಶ ಮಾಡಿ ಬಿಡುತ್ತಾರೆ. ಈಗಲೂ ಅರಣ್ಯದಿಂದ ಹೊರಕ್ಕೆ ಬರುವ ಕಾಡಾನೆಗಳು ಯಾವಾಗ ತಮ್ಮ ತೋಟ, ಮನೆಯತ್ತ ಬಂದು ಬಿಡುತ್ತವೆಯೋ ಎಂಬ ಭಯ ಈ ವ್ಯಾಪ್ತಿಯ ಜನರನ್ನು ಕಾಡುತ್ತಿದೆ.