ಮೈಸೂರು: ಗುಂಡ್ಲುಪೇಟೆ, ನಂಜನಗೂಡು ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ತಮ್ಮ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದಿನಿಂದ ಏಳು ದಿನಗಳ ಕಾಲ ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ ಎಂದು ಸಿಎಂ ತಿಳಿಸಿದರು.
ಈ ಉಪಚುನಾವಣೆ ಪ್ರತಿಷ್ಠೆಯ ಚುನಾವಣೆಯಲ್ಲ. ನಾವು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ ಅದಕ್ಕಾಗಿ ಜನರ ಬಳಿ ಕೂಲಿ ಕೇಳುತ್ತೇವೆ. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ನಾಲ್ಕು ವರ್ಷಗಳ ಅಧಿಕಾರವನ್ನು ಜನ ಒಪ್ಪಿಕೊಂಡಿದ್ದಾರೆ. ಈ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ತೀರ್ಪು ಆಗಲ್ಲ ಎಂದರು.
ಎರಡೂ ಕ್ಷೇತ್ರಗಳಲ್ಲಿ ನಾವೇ ಗೆಲ್ತೀವಿ, ದಲಿತರ ಮೀಸಲಾತಿಯನ್ನ ಶೇ.72 ಕ್ಕೆ ಹೆಚ್ಚಳ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪಕ್ಕದ ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿಯಿದೆ. ಹಾಗಾಗಿ ಮೀಸಲಾತಿ ಹೆಚ್ಚಿಸಲು ತಜ್ಞರೊಂದಿಗೆ ಚರ್ಚಿಸುತ್ತಿದ್ದೇವೆ. ಇದು ನಮ್ಮ ಬದ್ಧತೆ. ಬಿಜೆಪಿ ಸದಾ ಮೀಸಲಾತಿ ವಿರೋಧಿಗಳು ಎಂದು ಕಿಡಿಕಾರಿದರು.