ಮಡಿಕೇರಿ: ಕರ್ತವ್ಯ ನಿರತ ಪೊಲೀಸರಿಗೆ ಲಭ್ಯವಾಗುವ ವೈದ್ಯಕೀಯ ಸೌಲಭ್ಯಗಳು ನಿವೃತ್ತ ಪೊಲೀಸರಿಗೂ ಒದಗಿಸುವಂತಾಗಬೇಕು ಎಂದು ನಿವೃತ್ತ ಪೋಲಿಸ್ ಉಪ ಅಧೀಕ್ಷಕರಾದ ವೈ.ಡಿ.ಕೇಶವಾನಂದ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ಘಟಕ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಪಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಿವೃತ್ತ ಪೊಲೀಸರು ವೈದ್ಯಕೀಯ ವೆಚ್ಚ ಭರಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ವೃತ್ತಿಯಲ್ಲಿರುವ ಪೊಲೀಸರಿಗೆ ಇರುವ ವೈದ್ಯಕೀಯ ಸೌಲಭ್ಯವನ್ನು ನಿವೃತ್ತ ಪೊಲೀಸರಿಗೂ ಮುಂದುವರೆಸುವಂತಾಗಬೇಕು. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಿದೆ ಎಂದು ಅವರು ಸಲಹೆ ನೀಡಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪ್ರಕರಣ ಕಡಿಮೆ ಮಾಡುವುದು, ಸಂಚಾರ ದಟ್ಟಣೆ ನಿಯಂತ್ರಣ ಮಾಡುವುದು, ಗಣ್ಯರು ಆಗಮಿಸುವ ಸಂದರ್ಭದಲ್ಲಿ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡುವುದು ಹೀಗೆ ದಿನದ 24 ಗಂಟೆಯೂ ಒಂದಲ್ಲ ಒಂದು ರೀತಿ ಕರ್ತವ್ಯದಲ್ಲಿ ತೊಡಗಿರುತ್ತಾರೆ. ಪೊಲೀಸರ ಸೇವೆ ಸ್ಮರಣೀಯ ಎಂದರು.
ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಿಸಿ ಮಾತನಾಡಿ, ಪೊಲೀಸ್ ಸೇವೆಯು ಜವಾಬ್ದಾರಿಯುತ ಹಾಗೂ ಕರ್ತವ್ಯ ನಿಷ್ಠ ಕಠಿಣ ಸೇವೆಯಾಗಿದ್ದು, ಪೊಲೀಸರು ಸಮಾಜದ ರಕ್ಷಣೆಯಲ್ಲಿ ಪ್ರಮುಖಪಾತ್ರ ವಹಿಸುತ್ತಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಪೊಲೀಸರು ಹಗಲು ರಾತ್ರಿ ಎನ್ನದೆ ಸಮಾಜದಲ್ಲಿ ಶಾಂತಿ ಕಾಪಾಡಲು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಆ ನಿಟ್ಟಿನಲ್ಲಿ ಪೊಲೀಸರ ಸೇವೆ ಸ್ಮರಣೀಯ, ಜೊತೆಗೆ ಪೊಲೀಸರು ಸಹ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದರು.
ಅಬ್ದುಲ್ ಮಜೀದ್ ಗೆ ಕಾರ್ಯಪ್ಪ ಟ್ರೋಫಿ:
ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸೆಟೇಬಲ್ ಆಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ಮಜೀದ್ ಅವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಟ್ರೋಪಿ ವಿತರಿಸಲಾಯಿತು. ನಿವೃತ್ತ 12 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಆರ್ ಪಿಐ ತಿಮ್ಮಪ್ಪಗೌಡ ಅವರು ಪಥಸಂಚಲನದ ನೇತೃತ್ವ ವಹಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಅಪ್ಪಯ್ಯ, ಕರ್ನಲ್ ಕೆ.ಸಿ.ಸುಬ್ಬಯ್ಯ, ಉತ್ತಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಡಿಸಿಪಿ ಪೂಣಚ್ಚ, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇತರರು ಹಾಜರಿದ್ದರು.