ಪಿರಿಯಾಪಟ್ಟಣ: ಜಮೀನಿನಲ್ಲಿ ಸಂಗ್ರಹಿಸಲಾಗಿದ್ದ ರಾಗಿ ಮತ್ತು ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ವಿದ್ಯುತ್ ಕಿಡಿ ತಗುಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಲಕ್ಷಾಂತರ ರೂ ನಷ್ಟವಾಗಿರುವ ಘಟನೆ ತಾಲೂಕಿನ ಬಿಳಗುಂದ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಬಿಳಗುಂದಕೊಪ್ಪಲು ಗ್ರಾಮದ ತಮ್ಮಯ್ಯನವರ ಪುತ್ರ ಪುಟ್ಟರಾಜು ಎಂಬುವರಿಗೆ ಸೇರಿದ ಹುಲ್ಲಿನ ಮೆದೆಯೇ ಅಗ್ನಿ ಅವಘಡಕ್ಕೆ ಸಿಕ್ಕಿ ಕರಕಲಾಗಿದ್ದು ಲಕ್ಷಾಂತರೂ ನಷ್ಟವಾಗಿದೆ. ಇವರು ಈ ಬಾರಿ ಮಳೆ ಇಲ್ಲದಿದ್ದರೂ ಕಷ್ಟಪಟ್ಟು ಪಂಪ್ ಸೆಟ್ ನೀರನ್ನು ಬಳಸಿಕೊಂಡು ರಾಗಿ ಮತ್ತು ಭತ್ತದ ಕೃಷಿ ಮಾಡಿದ್ದರು. ಇದರಿಂದ ಬಂದಂತಹ ಲಕ್ಷಾಂತರ ರೂ ಮೌಲ್ಯದ ಹುಲ್ಲನ್ನು ಬೇಸಿಗೆಗೆಂದೇ ಸಂಗ್ರಹಿಸಿಟ್ಟಿದ್ದರು. ಪಕ್ಕದ ಜಮೀನಿನ ಕುಶಾಲನಗರದ ನಿವಾಸಿ ನಿವೃತ್ತ ಸೆಸ್ಕ್ ನೌಕರ ವಿಶ್ವನಾಥ್ ಎಂಬುವವರ ಜಮೀನಿನಲ್ಲಿ ಸಿಲ್ವರ್ ಮರಗಳನ್ನು ಬೆಳೆದಿದ್ದರು. ಈ ಜಮೀನಿನಲ್ಲಿ ವಿದ್ಯುತ್ ತಂತಿ ಹಾದು ಹೋಗಿತ್ತು. ಸಿಲ್ವರ್ ಮರಗಳ ರೆಂಬೆಗಳು ವಿದ್ಯುತ್ ತಂತಿಗೆ ತಗುಲಿ ಇದರ ಕಿಡಿ ಪಕ್ಕದ ಜಮೀನಿನಲ್ಲಿ ಇದ್ದ ಪುಟ್ಟರಾಜುರವರ ಹುಲ್ಲಿನ ಮೆದೆಗೆ ಬಿದ್ದಿದ್ದರಿಂದ ಬೆಂಕಿ ಹೊತ್ತಿ ಉರಿದಿದೆ. ಪರಿಣಾಮ ಲಕ್ಷಾಂತರ ರೂ ಬೆಲೆ ಬಾಳುವ ಹುಲ್ಲು ಭಸ್ಮವಾಗಿದೆ.
ಸುದ್ದಿ ತಿಳಿದ ಪಿರಿಯಾಪಟ್ಟಣದ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರಾದರೂ ಬಹಳಷ್ಟು ಹುಲ್ಲು ಬೆಂಕಿಗಾಹುತಿಯಾಗಿತ್ತು. ಈ ಬಗ್ಗೆ ಪುಟ್ಟರಾಜುರವರು ಬೆಟ್ಟದಪುರ ಪೊಲೀಸ್ ಠಾಣೆಗೆ ಹಾಗೂ ಸೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.