ಮಡಿಕೇರಿ: ಬಾವಿ ನೀರಿಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆ ಎದುರು ಪ್ರತಿಭಟನೆ ನಡೆಸಿದ ಬಿಳಿಗೇರಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಿಳಿಗೇರಿ ಗ್ರಾಮದ ಬಕ್ಕಬಾಣೆ ಎಂಬಲ್ಲಿ ಗ್ರಾ.ಪಂ.ವತಿಯಿಂದ ಕುಡಿಯುವ ನೀರನ್ನು ಪೂರೈಸುವ ತೆರೆದ ಬಾವಿಗೆ ವ್ಯಕ್ತಿಯೊಬ್ಬರು ವಿಷ ಬೆರೆಸಿದ ಪ್ರಕರಣ ಸೋಮವಾರ ಸಂಝೆ ಬೆಳಕಿಗೆ ಬಂದಿತ್ತು. ಬಾವಿಯಲ್ಲಿ ಮೀನು ಮತ್ತು ಏಡಿಗಳು ಸತ್ತು ತೇಲುತ್ತಿತ್ತಲ್ಲದೆ ನೀರು ದುರ್ವಾಸನೆ ಬೀರುತ್ತಿತ್ತು. ಇದನ್ನು ಪರೀಕ್ಷಿಸಿದ ಗ್ರಾಮಸ್ಥರಿಗೆ ವಿಷ ಬೆರೆತ್ತಿರುವುದು ತಿಳಿದು ಬಂತು.
ವಿಷ ಬೆರೆಸಿದವರ ಪತ್ತೆಗೆ ಗ್ರಾಮಸ್ಥರು ಸ್ಥಳೀಯ ದೇವಾಸ್ಥಾನದಲ್ಲಿ ಹರಕೆಯ ಮೊರೆ ಹೋದರು. ಹರಕೆ ವಿಚಾರ ತಿಳಿಯುತ್ತಿದ್ದಂತೆ ಬಿಳಿಗೇರಿ ಗ್ರಾಮದ ಮಂಜುನಾಥ್ ಎಂಬುವವರು ಸ್ಥಳೀಯರೊಬ್ಬರಿಗೆ ದೂರವಾಣಿ ಕರೆ ಮಾಡಿ ಹರಕೆ ಮಾಡುವುದು ಬೇಡ, ಬಾವಿಗೆ ನಾನೇ ವಿಷ ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಗ್ರಾ.ಪಂ. ಸದಸ್ಯರು ಹಾಗೂ ಸ್ಥಳೀಯರು ಮಂಜುನಾಥ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.
ಸೋಮವಾರ ರಾತ್ರಿ ದೂರು ಸ್ವೀಕರಿಸಲು ಪೊಲೀಸರು ವಿಳಂಬ ತೋರಿದರು ಎನ್ನುವ ಕಾರಣಕ್ಕಾಗಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ಮಂಗಳವಾರ ಬೆಳಗ್ಗೆ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಆರೋಪಿಯನ್ನು ಬಿಡುಗಡೆ ಮಾಡದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಳಿಗೇರಿ ಗ್ರಾ.ಪಂ. ಸದಸ್ಯರಾದ ಪುಷ್ಪಾ, ಅಬ್ದುಲ್ ಖಾದರ್ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.