ಹಾಸನ: 22ನೇ ತೀರ್ಥಂಕರರಾದ ಭಗವಾನ್ ನೇಮಿನಾಥ ಸ್ವಾಮಿ ಮತ್ತು ಯಕ್ಷಿ ಕೂಷ್ಮಾಂಡಿನಿ ದೇವಿಯವರ ಮಹಾರಥೋತ್ಸವ ಸಹಸ್ರಾರು ಭಕ್ತರ ನಡುವೆ ಅದ್ಧೂರಿಯಾಗಿ ಶ್ರವಣಬೆಳಗೊಳದಲ್ಲಿ ಅದ್ಧೂರಿಯಾಗಿ ನಡೆಯಿತು.
ಭಂಡಾರ ಬಸದಿಯಲ್ಲಿ ಭಗವಾನ್ ನೇಮಿನಾಥ ತೀರ್ಥಂಕರರ ಮತ್ತು ಯಕ್ಷಿ ಕೂಷ್ಮಾಂಡಿನಿ ದೇವಿಯ ಧಾಮರ್ಿಕ ವಿಧಿ-ವಿಧಾನಗಳು ಬೆಳಗ್ಗಿನಿಂದಲೇ ನಡೆದು ಮಠದ ಮುಂಭಾಗದಲ್ಲಿ ಸಿದ್ಧಗೊಂಡಿದ್ದ ಮಹಾರಥಕ್ಕೆ ಭಗವಾನ್ ನೇಮಿನಾಥ ತೀರ್ಥಂಕರರ ಮತ್ತು ಅಕ್ಕ-ಪಕ್ಕದಲ್ಲಿ ಯಕ್ಷ ಕೂಷ್ಮಾಂಡಿನಿ ದೇವಿ ಮತ್ತು ಗೋಮೇಧ ಯಕ್ಷಿ ಮುಂಭಾಗದಲ್ಲಿ ನಿರ್ವಾಹನ ಯಕ್ಷರನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಸಂಪ್ರದಾಯದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಇದಾದ ಬಳಿಕ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮಧ್ಯಾಹ್ನ 12ಕ್ಕೆ ಸರಿಯಾಗಿ ಪೂಜೆ ಸಲ್ಲಿಸಿ ನಗಾರಿ ಬಾರಿಸಿ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ನೆರೆದಿದ್ದ ಸಹಸ್ರಾರು ಭಕ್ತರು ಭಗವಾನ್ ಬಾಹುಬಲಿಗೆ ಜಯಕಾರದ ಘೋಷಣೆ ಕೂಗುತ್ತಾ ರಥದೊಂದಿಗೆ ಮೆರವಣಿಗೆಯಲ್ಲಿ ತೆರಳಿದರು. ರಥ ಬಂಡಾರಿ ಬಸದಿಯ ದಕ್ಷಿಣ ದಿಕ್ಕಿನವರೆಗೆ ತೆರಳಿತು. ಈ ವೇಳೆ ನೆರೆದಿದ್ದ ಮಹಿಳೆಯರು, ಮಕ್ಕಳು ಹಣ್ಣು ಜವನ ಎಸೆದು ತಮ್ಮ ಹರಕೆ ತೀರಿಸಿ ದೇವರು ಒಳ್ಳೆಯದು ಮಾಡಲೆಂದು ಪ್ರಾರ್ಥಿಸಿದರು.
ಮೆರವಣಿಗೆಗೆ ಮೈಸೂರು ಬ್ಯಾಂಡ್ಸೆಟ್, ಸಾಕ್ಸಪೋನ್ ವಾದನ ಮೆರುಗು ನೀಡಿತು. ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಯುವಕರು ನೃತ್ಯ ಮಾಡುತ್ತಾ ಮುನ್ನಡೆದರು. ವಿವಿಧ ಕಲಾತಂಡಗಳು ಗಮನಸೆಳೆದವು. ಅಲ್ಲದೆ ದಾರಿಯುದ್ಧಕ್ಕೂ ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ ನಡೆಯಿತು. ಬಂಡಾರಿ ಬಸದಿ ಪ್ರದಕ್ಷಿಣೆ ಬಳಿಕ ಸ್ವಸ್ಥಾನಕ್ಕೆ ರಥವನ್ನು ತರಲಾಯಿತು.
ಮೆರವಣಿಗೆಯಲ್ಲಿ ಕನಕಗಿರಿಯ ಸ್ವಸ್ತಿಶ್ರೀ ಭುವನಕೀರ್ತಿ ಸ್ವಾಮೀಜಿ, ತಮಿಳುನಾಡಿನ ಅರ್ಹಂತಗಿರಿಯ ಸ್ವಸ್ತಿಶ್ರೀ ಧವಲಕೀರ್ತಿ ಸ್ವಾಮೀಜಿ, ನರಸಿಂಹರಾಜಪುರದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ವಿಚಾರಪಟ್ಟ ಕ್ಷುಲ್ಲಕಶ್ರೀ ಸಿದ್ಧಾಂತಕೀರ್ತಿ ಸ್ವಾಮೀಜಿ ಪಾಲ್ಗೊಂಡು ಭಕ್ತರನ್ನು ಹರಸಿದರು.