ಚಾಮರಾಜನಗರ: ಮಹಿಳೆಯರ ಮಾಂಗಲ್ಯಗಳನ್ನು ಎಗರಿಸುತ್ತಿದ್ದ ಮೂವರು ಕಳ್ಳಿಯರು ಶಿವಮೊಗ್ಗದಲ್ಲಿ ಸಿಕ್ಕಿಬಿದ್ದಿದ್ದಾರೆ. ಮೈಸೂರಿನ ವಿಜಯನಗರ ನಿವಾಸಿ ವಸಂತ ಅಲಿಯಾಸ್ ಗೀತಾ ಅಲಿಯಾಸ್ ಸುಮಿತ್ರ(50), ಹಾಸನದ ಚನ್ನರಾಯಪಟ್ಟಣದ ನಾಗರತ್ನ ಅಲಿಯಾಸ್ ಸವಿತಾ(35) ಮತ್ತು ಗುಂಡ್ಲುಪೇಟೆ ತಾಲೂಲಿನ ಮುದ್ದಯ್ಯನಹುಂಡಿ ಗ್ರಾಮದ ಜ್ಯೋತಿ ಅಲಿಯಾಸ್ ರಮ್ಯ(37) ಬಂಧಿತರು.
ಈ ಮೂವರು ಒಟ್ಟಾಗಿ ಜಾತ್ರೆ, ದೇವಸ್ಥಾನ, ಬಸ್ ನಿಲ್ದಾಣಗಳಿಗೆ ತೆರಳಿ ಜನಜಂಗುಳಿಯಲ್ಲಿ ಮಹಿಳೆಯರ ಮಾಂಗಲ್ಯ ಸರ ಸೇರಿದಂತೆ ಚಿನ್ನದ ಸರಗಳನ್ನು ಎಗರಿಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಕೊಳ್ಳೇಗಾಲ ತಾಲೂಕಿನ ಲಿಂಗಣಾಪುರ ಗ್ರಾಮದ ನಿವಾಸಿ ಪ್ರಭುಸ್ವಾಮಿ ಅವರ ಪತ್ನಿ ಗೀತಾ ಎಂಬುವರು ಫೆ.18ರಂದು ಚಿಲಕವಾಡಿ ಬೆಟ್ಟಕ್ಕೆ ಆನಂದಗುರೂಜಿ ಆಗಮಿಸಿದ ಹಿನ್ನಲೆಯಲ್ಲಿ ಅವರನ್ನು ನೋಡಲು ತೆರಳಿದ್ದರು. ಈ ವೇಳೆ ಜನಜಂಗುಳಿಯಲ್ಲಿ ಅವರ ಗೀತಾ ಅವರ ಮಾಂಗಲ್ಯವನ್ನು ಯಾರೋ ಕಳವು ಮಾಡಿದ್ದರು. ಈ ಬಗ್ಗೆ ಅವರು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾತ್ರೆಗಳ ಸಮಯದಲ್ಲಿ ಮಹಿಳೆಯರ ಚಿನ್ನದ ಮಾಂಗಲ್ಯ ಸರಗಳನ್ನು ಕಳುವು ಮಾಡುತ್ತಿದ್ದಾಗ ವಸಂತ, ನಾಗರತ್ನ, ಜ್ಯೋತಿ ಅವರು ಸಿಕ್ಕಿಬಿದ್ದಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ ಅವರು ಚಾಮರಾಜನಗರ ವ್ಯಾಪ್ತಿಯಲ್ಲಿ ಮಾಡಿದ್ದ ಕಳವು ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದರು.
ಆರೋಪಿಗಳನ್ನು ಕೊಳ್ಳೇಗಾಲ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಮೇಲೆ ಹಾಜರುಪಡಿಸಿ ವಿಚಾರಣೆಗಾಗಿ ಕೊಳ್ಳೇಗಾಲ ಪೊಲೀಸರು ತಮ್ಮ ವಶಕ್ಕೆ ಪಡೆದು ಕೊಳ್ಳಲಾಗಿತ್ತು. ಕೊಳ್ಳೇಗಾಲ ವೃತ್ತ ನಿರೀಕ್ಷಕರಾದ ಅಮರನಾರಾಯಣ್ ಅವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಸುಮಾರು ನಾಲ್ಕು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಕಳವು ಮಾಡಿದ ಮಾಲುಗಳನ್ನು ಪಿರಿಯಾಪಟ್ಟಣ, ಮೈಸೂರು, ಚೆನ್ನರಾಯಪಟ್ಟಣ ಹಾಗೂ ಗುಂಡ್ಲಪೇಟೆಯ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದರು. ಪೊಲೀಸರು ಬಂಧಿತರಿಂದ 9 ಚಿನ್ನದ ಮಾಂಗಲ್ಯ ಸರಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ತೂಕ 227 ಗ್ರಾಂ ಆಗಿದ್ದು, ಆರು ಲಕ್ಷ ರೂ. ಮೌಲ್ಯದಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸರು ಇದೇ ಆರೋಪಿಗಳಿಂದ ಚಾಮರಾಜನಗರ ಜಿಲ್ಲೆ ಮ.ಮ.ಬೆಟ್ಟ ಪೊಲೀಸ್ ಠಾಣೆಗೆ ಸಂಬಂಧಿಸಿದ ಒಟ್ಟು 09 ಸರಗಳ್ಳತನ ಪ್ರಕರಣಗಳಲ್ಲಿ ಒಟ್ಟು 297.44 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳನ್ನು ಹಾಗೂ ಗುಂಡ್ಲುಪೇಟೆ ಪೊಲೀಸ್ ಠಾಣೆಯ 01 ಸರಗಳ್ಳತನ ಪ್ರಕರಣದಲ್ಲಿ 34 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಒಟ್ಟು 10 ಪ್ರಕರಣಗಳಲ್ಲಿ 331.44 ಗ್ರಾಂ ತೂಕದ 8,15,500 ರೂ ಮೌಲ್ಯದ ಚಿನ್ನದ ಮಾಂಗಲ್ಯ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕೊಳ್ಳೇಗಾಲ ವೃತ್ತ ನಿರೀಕ್ಷಕ ಅಮರ್ ನಾರಾಯಣ್, ಪಿಎಸ್ಐ ವನರಾಜು, ಎಎಸ್ಐ ರಾಮಚಂದ್ರ, ಸಿಬ್ಬಂದಿ ನಾಗೇಶ್, ಮಂಜಪ್ಪ, ದ್ವಾರಕೇಶ್, ರತ್ನಮ್ಮ ಪಾಲ್ಗೊಂಡಿದ್ದರು.