ಮಡಿಕೇರಿ: ಕೊಡವರ ಹೊಸ ವರ್ಷಾಚರಣೆಯ ಎಡಮ್ಯಾರ್ ಒಂದ್ ಅನ್ನು ಹೊದ್ದೂರಿನಲ್ಲಿ ಆಚರಿಸಲಾಯಿತು.
ಕೊಡವ ಮಕ್ಕಡ ಕೂಟ ಹಾಗೂ ಹೊದ್ದೂರಿನ ಚೌರಿರ ಕುಟುಂಬದ ಮುಂದ್ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರು, ಮಕ್ಕಳು, ಮಹಿಳೆಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕೊಡವ ಮಕ್ಕಡ ಕೂಟದ ಸದಸ್ಯರು ಚೌರಿರ ಮಂದ್ ಮನೆಯ ನೆಲ್ಲಕ್ಕಿಬಾಡೆಯಲ್ಲಿ ನಿಂತು ಅಕ್ಕಿಹಾಕಿ ಸಕಲರಿಗೂ ಒಳಿತಾಗುವಂತೆ ದೇವರನ್ನು ಬೇಡಿಕೊಂಡರು.
ಮಹಿಳೆಯರು ತಳಿಯಲ್ಲಿ ದೀಪ, ಎತ್ತು, ನೇಗಿಲು ನೊಗದೊಂದಿಗೆ ಗದ್ದೆಗೆ ತೆರಳಿ ಸೂರ್ಯದೇವನಿಗೆ ಅಕ್ಕಿ ಹಾಕಿ ಭೂತಾಯಿಗೆ ಪೂಜೆ ಸಲ್ಲಿಸಿ ಉಳುಮೆಯನ್ನು ಮಾಡಲಾಯಿತು.
ಈ ಸಂದರ್ಭ ಹಿರಿಯರಾದ ಚೌರಿರ ಉತ್ತಯ್ಯ ಮಾತನಾಡಿ ನಾನು ಎಂಬ ಅಹಂಕಾರವನ್ನು ಬಿಟ್ಟು ನಾವೆಂಬ ಭಾವನೆ ಹೊಂದಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕೆಂದು ಹೇಳಿದರಲ್ಲದೆ, ಕೊಡವ ಪದ್ಧತಿ ವಿಶಿಷ್ಟವಾಗಿದ್ದು, ಎಲ್ಲರೂ ಅನುಸರಿಸಬೇಕೆಂದು ಹೇಳಿದರು.
ಕುಟುಂಬದ ಅಧ್ಯಕ್ಷ ಚೌರಿರ ಪೂವಯ್ಯ ಮಾತನಾಡಿ ಕಾಲಕ್ಕೆ ತಕ್ಕಂತೆ ಸಂಸ್ಕೃತಿ, ಸಂಪ್ರದಾಯವನ್ನು ಬದಲಾಯಿಸಿ ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ವಿಷ್ಣುಕಾರ್ಯಪ್ಪ ಮಾತನಾಡಿ ಕೊಡವರ ಸಂಸ್ಕೃತಿ, ಆಚಾರ, ವಿಚಾರವನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕಿದೆ. ಕೃಷಿ ಪ್ರಧಾನ ಕೊಡಗು ಆಧುನಿಕತೆಯ ಹೊಡೆತಕ್ಕೆ ಸಿಲುಕಿದ್ದು, ಇಲ್ಲಿನ ಭೂಮಿ, ನೇಗಿಲು, ನೊಗಗಳೆಲ್ಲ ಮರೆಯಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ವಹಿಸಿದ್ದರು