ಮಡಿಕೇರಿ: ಕೊಡಗಿನ ದಿಡ್ಡಳ್ಳಿ ನಿರಾಶ್ರಿತರಿಗೆ ಸರ್ಕಾರ ಜಿಲ್ಲೆಯ ಬಸವನಹಳ್ಳಿ, ಮದಲಾಪುರ- ಬ್ಯಾಡಗೊಟ್ಟ ಹಾಗೂ ಕೆದಮುಳ್ಳ್ಳೂರು ಗ್ರಾಮಗಳ ಬಳಿ ಜಾಗ ಗುರ್ತಿಸಿ ಸಾಕಷ್ಟು ಹಣ ಖರ್ಚು ಮಾಡಿ ಬಡಾವಣೆ ನಿರ್ಮಿಸಲು ಮುಂದಾಗಿದೆ. ಆದರೆ ಕುಶಾಲನಗರ ಬಳಿಯ ಬಸವನಹಳ್ಳಿ ರಾಜ್ಯ ಹೆದ್ದಾರಿ ಬಳಿ ನಿವೇಶನ ನೀಡುತ್ತೇವೆ ಬನ್ನಿ ಎಂದರೂ ಬರುತ್ತಿಲ್ಲ, ಇವರಂತ ಜನರು ಮತ್ತೊಬ್ಬರಿದ್ದಾರೆಯೇ ಎಂದು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಖಾರವಾಗಿ ನುಡಿದರು.
ದಿಡ್ಡಳ್ಳಿ ನಿರಾಶ್ರಿತರಿಗೆ ಬಸವನಹಳ್ಳಿ ಬಳಿ ಗುರ್ತಿಸಲಾಗಿರುವ ಜಾಗಕ್ಕೆ ಭಾನುವಾರ ಭೇಟಿ ನೀಡಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು.
ಕೆಲವರು ಸಮಸ್ಯೆಯನ್ನು ಜೀವಂತವಾಗಿಡಲು ನೋಡುತ್ತಾರೆ. ಆದಿವಾಸಿಗಳು ಮುಖ್ಯವಾಹಿನಿಗೆ ಬರುವುದು ಬೇಡವೇ? ನಾಗರಿಕ ಯುಗದಲ್ಲಿಯೂ ಸಹ ಆದಿವಾಸಿಗಳು ಕಾಡಿನಲ್ಲಿಯೇ ಇರಬೇಕೆ? ಈ ಬಗ್ಗೆ ಆದಿವಾಸಿಗಳೇ ಆತ್ಮಾವಲೋಕನ ಮಾಡಬೇಕಿದೆ ಎಂದು ಕಂದಾಯ ಸಚಿವರು ಸಲಹೆ
ಸರ್ಕಾರ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಗೆ ಸಾಕಷ್ಟು ಅನುದಾನ ನೀಡಿದೆ. ನಿವೇಶನ ಜೊತೆಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಬಸವನಹಳ್ಳಿಯ ಜಾಗ ಮಕ್ಕಳ ಭವಿಷ್ಯಕ್ಕೂ ಉಜ್ವಲವಾಗಿದೆ. ರಾಜ್ಯ ಹೆದ್ದಾರಿ ಬಳಿ ಇರುವುದರಿಂದ ಪ್ರವಾಸೋದ್ಯಮದಿಂದ ಉದ್ಯೋಗವೂ ದೊರೆಯಲಿದೆ. ಅದನ್ನು ಬಿಟ್ಟು ಕಾಡಿನಲ್ಲಿಯೇ ಇರುತ್ತೇವೆ ಎಂದರೆ ಹೇಗೆ? ಬದಲಾವಣೆಗೆ ಹೊಂದಿಕೊಳ್ಳುವುದು ಬೇಡವೇ ಎಂದು ಕಾಗೋಡು ತಿಮ್ಮಪ್ಪ ಅವರು ಪ್ರತಿಕ್ರಿಯಿಸಿದರು.
ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅಕ್ರಮ ಸಕ್ರಮ ಸಮಿತಿಯಲ್ಲಿ ಇಬ್ಬರು ಸದಸ್ಯರು ಹಾಜರಾದರೆ ಸಾಕು, ಅನುಮೋದನೆ ಪಡೆದುಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ವಾರಕ್ಕೊಮ್ಮೆ ಸಭೆ ನಡೆಸಬೇಕು. ಸದಸ್ಯರು ಹಾಜರಾಗದಿದ್ದರೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರುವಂತೆ ತಹಶೀಲ್ದಾರರಿಗೆ ಕಂದಾಯ ಸಚಿವರು ನಿರ್ದೇಶನ ನೀಡಿದರು.ಅಕ್ರಮ ಸಕ್ರಮ ಯೋಜನೆಯಡಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಈ ತಾಲೂಕಿಗೆ ಹೆಚ್ಚುವರಿ ಸಮಿತಿ ರಚನೆ ಮಾಡಲು ಆದೇಶ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು.
ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ತುಂಬಾ ವಿಳಂಭ ಮಾಡಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ. ಕಂದಾಯ ಇಲಾಖೆಯ ಅರ್ಜಿಗಳು ವಿಳಂಭವಾಗದಂತೆ ನೋಡಿಕೊಳ್ಳುವುದು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ ಅವರು ಅಕ್ರಮ ಸಕ್ರಮ ಯೋಜನೆಯ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿರಾಜಪೇಟೆ ತಾಲ್ಲೂಕಿಗೂ ಉಪ ಸಮಿತಿ ರಚಿಸಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು.
ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಭೂ ದಾಖಲೆಗಳ ಉಪ ನಿರ್ದೇಶಕರು, ತಹಸೀಲ್ದಾರರು, ಕಂದಾಯ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.