ಚಾಮರಾಜನಗರ: ಅದ್ಯಾಕೋ ಗೊತ್ತಿಲ್ಲ ಗುಂಡ್ಲುಪೇಟೆಗೂ ಒಳಚರಂಡಿಗೂ ಹಾದುಬರುವ ಬರುವ ಲಕ್ಷಣಗಳೇ ಕಂಡು ಬರುತ್ತಿಲ್ಲ. ಕಳೆದ ಹತ್ತು ವರ್ಷಗಳಿಂದ ಒಂದಲ್ಲ ಒಂದು ಕಾರಣಕ್ಕೆ ಆಮೆ ನಡಿಗೆಯಲ್ಲಿ ಸಾಗುತ್ತಿರುವ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಸಿಗುವ ಯಾವ ಸೂಚನೆಯೂ ಕಾಣುತ್ತಿಲ್ಲ.
ಇವತ್ತು ಗುಂಡ್ಲುಪೇಟೆ ಪಟ್ಟಣಕ್ಕೊಂದು ಸುತ್ತು ಹೊಡೆದು ಬಂದರೆ ಜನ ಬಾಯಿ ತುಂಬಾ ಒಳಚರಂಡಿಯ ಕಾಮಗಾರಿಯಿಂದಾದ ತೊಂದರೆ ಬಗ್ಗೆಯೇ ಮಾತನಾಡುತ್ತಾರೆ. ಇದಕ್ಕೆ ಕಾರಣ ಕುಂಟುತ್ತಾ ಸಾಗಿದ ಕಾಮಗಾರಿ ಮತ್ತು ಅದರಿಂದ ಜನ ಅನುಭವಿಸಿದ ತೊಂದರೆ. ಒಂದು ವೇಳೆ ಈ ಕಾಮಗಾರಿಯನ್ನು ಮನಸಿಟ್ಟು ಮಾಡಿದ್ದರೆ ಅದ್ಯಾವತ್ತೊ ಕಾಮಗಾರಿ ಮುಗಿದು ಸಾರ್ವಜನಿಕರು ಇದರ ಅನುಕೂಲ ಪಡೆಯಬಹುದಿತ್ತೇನೋ? ಆದರೆ ಅದು ಆಗಲೇ ಇಲ್ಲ. ನೂರೆಂಟು ವಿಘ್ನಗಳು ಈ ಕಾಮಗಾರಿಯನ್ನು ಕಾಡಿದ್ದರಿಂದ ಕಳೆದೊಂದು ದಶಕದಿಂದ ನಡೆಯುತ್ತಲೇ ಇದೆ. ಜನ ಹಿಡಿಶಾಪ ಹಾಕುತ್ತಲೇ ಇದ್ದಾರೆ.
ಇನ್ನು ಹತ್ತು ವರ್ಷಗಳ ಹಿಂದಿನ ಪ್ಲಾನ್ ಗಳು ಇವತ್ತಿನ ಪರಿಸ್ಥಿತಿಯಲ್ಲಿ ಪ್ಲಾಪ್ ಆಗಿದೆ. ಪರಿಣಾಮ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಯುಜಿಡಿಯ ಪಿಟ್ ಹಾಗೂ ಮ್ಯಾನ್ಹೋಲ್ಗಳು ಸಂಚರಿಸುವ ವಾಹನಗಳ ಭಾರವನ್ನು ತಾಳಲಾರದೆ ಕುಸಿದು ಬಿದ್ದು, ಬಳಕೆಗೆ ಬರುವ ಮುನ್ನವೇ ದುರಸ್ತಿಗೀಡಾಗುತ್ತಿವೆ. ಜಿಲ್ಲಾ ಕೇಂದ್ರದ ಸಂಪರ್ಕ ರಸ್ತೆಯಾದ ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿ ಭಾರೀ ವಾಹನಗಳು ಸಂಚರಿಸುವುದರಿಂದ ಅವುಗಳ ಭಾರ ಸಹಿಸಲಾಗದೆ ಮ್ಯಾನ್ಹೋಲ್ಗೆ ಮುಚ್ಚಿದ ಮುಚ್ಚಳಗಳು ಒಡೆದು ಹೋಗುತ್ತಿವೆ.
ಇನ್ನು ಪ್ರವಾಸಿ ಮಂದಿರದಿಂದ ಚಾಮರಾಜನಗರಕ್ಕೆ ತೆರಳುವ ಶಿವಾನಂದ ವೃತ್ತದವರೆಗಿನ ಹಲವು ಮ್ಯಾನ್ಹೋಲ್ ಗಳ ಮುಚ್ಚಳಗಳು ಈಗಾಗಲೇ ಒಡೆದು ಹೋಗಿದ್ದು, ವಾಹನ ಸವಾರರು ಭಯಪಡುವಂತಾಗಿದೆ. ಕೆಲವು ಬಡಾವಣೆಗಳಲ್ಲಿ ಮ್ಯಾನ್ಹೋಲ್ ಗೆ ಮುಚ್ಚಲಾಗಿದ್ದ ಮುಚ್ಚಳವನ್ನೇ ಅಪಹರಿಸಿರುವ ದುಷ್ಕರ್ಮಿಗಳು ಅದನ್ನು ತಮ್ಮ ಸ್ವಂತ ಕೆಲಸಗಳಿಗೆ ಉಪಯೋಗಿಸಿಕೊಂಡಿದ್ದಾರೆ. ಹೀಗಾಗಿ ಮ್ಯಾನ್ಹೋಲ್ಗಳು ಬಾಯಿತೆರೆದು ನಿಂತಿವೆ. ಹಿಂದೆ ಮ್ಯಾನ್ಹೋಲ್ಗೆ ಕಬ್ಬಿಣದ ಮುಚ್ಚಳ ಮುಚ್ಚುತ್ತಿದ್ದರಿಂದ ಕೆಲವರು ಅದನ್ನು ಕದ್ದು ಮಾರಿಕೊಂಡವರೂ ಇಲ್ಲದಿಲ್ಲ.ಪಟ್ಟಣದ ಕೇರಳ ರಸ್ತೆ ವ್ಯಾಪ್ತಿಯ ಎಚ್.ಎಸ್.ಮಹದೇವಪ್ರಸಾದ್ ನಗರ, ದರ್ಶನ್ ಅವೆನ್ಯೂ ಬಡಾವಣೆ, ಅಶ್ವಿನಿ ಬಡಾವಣೆ ಸೇರಿದಂತೆ ವಾಹನಗಳ ಸಂಚಾರ ಹೆಚ್ಚಿರುವ ಸ್ಥಳಗಳಿಂದಲೇ ಮ್ಯಾನ್ಹೋಲ್ನ ಮುಚ್ಚಳವನ್ನು ಅಪಹರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಇದೀಗ ಈ ಮ್ಯಾನ್ ಹೋಲ್ ಗಳು ಬಾಯಿತೆರೆದು ನಿಂತಿವೆ. ಇದರಿಂದಾಗಿ ಯಾವಾಗ ಬೇಕಾದರೂ ಅವಘಡ ಸಂಭವಿಸಬಹುದು.
ಇದೆಲ್ಲದರ ನಡುವೆ ವಿಜಯಪುರ ಬಳಿ ನಿರ್ಮಿಸಲು ಉದ್ದೇಶಿಸಿರುವ ಘಟಕಕ್ಕೆ ಅಳವಡಿಸಿದ ಸಿಮೆಂಟ್ ಪೈಪುಗಳು ಈಗಾಗಲೇ ಬಿರುಕುಬಿಟ್ಟಿದ್ದು ಸಿಮೆಂಟ್ ಚಕ್ಕೆಗಳು ಕಳಚಿ ಬೀಳುತ್ತಿವೆ. ಸುಮಾರು 6.7 ಕೋಟಿ ರೂಪಾಯಿಗಳ ವೆಚ್ಚದಲ್ಲಿ 23 ವಾರ್ಡ್ ಗಳಲ್ಲಿ ಕಾಮಗಾರಿ ಮುಗಿದಿದ್ದು, 45 ಕಿಮೀ ಉದ್ದದಲ್ಲಿ ಚೇಂಬರ್ ನಿರ್ಮಾಣ, ಕೊಳವೆ ಸಂಪರ್ಕಗಳನ್ನು ಮಾಡಲಾಗಿದೆ. ಇದಕ್ಕಾಗಿ ಹೊರವಲಯದಲ್ಲಿರುವ ಹೊಸೂರು ಬಡಾವಣೆ ಹಾಗೂ ಕಲ್ಯಾಣಿ ಕೊಳದ ಸಮೀಪದ ವಿಜಯಪುರದಲ್ಲಿ 12 ಎಕರೆ ಜಮೀನನ್ನು ಗುರುತಿಸಲಾಗಿದೆ. ಈ ನಡುವೆ ಹೊಸೂರು ಬಡಾವಣೆಯ ಮಲಿನ ನೀರು ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿ ವಿಳಂಬಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿ ಯಾವಾಗ ಮುಗಿದು ಬಳಕೆಗೆ ಲಭ್ಯವಾಗುತ್ತದೆಯೋ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.