ಮಡಿಕೇರಿ: ಸಂಬಾರ ಪದಾರ್ಥವೆಂದು ಹೇಳಿ ಆರೋಗ್ಯಕ್ಕೆ ಹಾನಿಕಾರಕವಾದ ಕ್ಯಾಸಿಯಾವನ್ನೆ ಚಕ್ಕೆಯೆಂದು ನಂಬಿಸಿ ಆಮದು ಮಾಡಿಕೊಳ್ಳುತ್ತಿದ್ದ ದಂಧೆಯ ವಿರುದ್ಧ ತಾವು ನಡೆಸುತ್ತಿರುವ ಹೋರಾಟಕ್ಕೆ ಹಂತ ಹಂತವಾಗಿ ಜಯ ಲಭಿಸುತ್ತಿದೆ ಎಂದು ಕಣ್ಣನ್ನೂರಿನ ಸಾಮಾಜಿಕ ಕಾರ್ಯಕರ್ತ ಲಿಯೊನಾರ್ಡ್ ಜಾನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರ ವ್ಯವಹಾರದ ಮೌನ ಪ್ರತಿಭಟನೆಗೆ ಕೇಂದ್ರ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ಕ್ಯಾಸಿಯಾ ಆಮದಿಗೆ ಈಗಾಗಲೇ ನಿರ್ಬಂಧ ಹೇರಲಾಗಿದೆ. ಆದರೂ ಕ್ಯಾಸಿಯಾವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಿರುವ ಬಗ್ಗೆ ಕೇಂದ್ರದ ಗಮನ ಸೆಳೆದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಕೆಲವು ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ಆಯುರ್ವೇದ, ಯುನಾನಿ ಹಾಗೂ ಹೋಮಿಯೋ ಔಷಧಿಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ಆಯುಷ್ ಎನ್ನುವ ಪ್ರತ್ಯೇಕ ಇಲಾಖೆಯನ್ನು ರಚಿಸಿ ನೂತನ ನಿಯಮವನ್ನು ಕೂಡ ಜಾರಿಗೆ ತಂದಿದೆ. ಔಷಧಿಗಳ ಗುಣಮಟ್ಟ ಪರಿಶೀಲನೆಗೆ ಆಯುರ್ವೇದ, ಯುನಾನಿ ಹಾಗೂ ಹೋಮಿಯೋ ಔಷಧಿ ತಯಾರಿಕೆಯ 15 ರಿಂದ 30 ಘಟಕಗಳ ಮೇಲೆ ನಿಗಾ ಇಡಲು ಒಬ್ಬ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ.
ಆದರೆ ಕೇರಳ ರಾಜ್ಯದಲ್ಲಿ ಸುಮಾರು 800 ಆಯುರ್ವೇದ ಔಷಧ ತಯಾರಿಕಾ ಘಟಕಗಳಿದ್ದರೂ ಕೇವಲ ಆರು ಮಂದಿ ಇನ್ಸ್ಪೆಕ್ಟರ್ ಗಳನ್ನು ನಿಯೋಜಿಸಲಾಗಿದೆ. ಕರ್ನಾಟಕ, ತಮಿಳುನಾಡು ಹಾಗೂ ದೆಹಲಿಯಲ್ಲಿ ಕನಿಷ್ಠ 30 ಇನ್ಸ್ಪೆಕ್ಟರ್ ಗಳಾದರೂ ಇದ್ದಾರೆ ಎಂದು ಲಿಯೊನಾರ್ಡ್ ಜಾನ್ ತಿಳಿಸಿದರು. ಕೇರಳದಲ್ಲಿ ತಯಾರಾಗುವ ಕೆಲವು ಆಯುರ್ವೇದದ ಔಷಧಿಗಳಲ್ಲಿ ಕ್ಯಾಸಿಯಾವನ್ನು ಬಳಸುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ ಇನ್ಸ್ಪೆಕ್ಟರ್ ಗಳ ಕೊರತೆಯನ್ನು ಸೃಷ್ಟಿಸಲಾಗಿದ್ದು, ಇದು ಭ್ರಷ್ಟ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಈ ನಡುವೆಯೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇರಳ ಸರಕಾರದ ಆರೋಗ್ಯ ಸಚಿವಾಲಯಕ್ಕೆ ನೋಟಿಸ್ ನೀಡಿ ಆಯುರ್ವೇದ ಔಷಧಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳೇನು ಎಂದು ಮುಂದಿನ 8 ವಾರಗಳ ಒಳಗೆ ವರದಿ ನೀಡುವಂತೆ ಸೂಚಿಸಿದೆ. ಇದು ಅತ್ಯಂತ ಸ್ವಾಗತಾರ್ಹ ಕ್ರಮವೆಂದು ಮೆಚ್ಚುಗೆ ವ್ಯಕ್ತಪಡಿಸಿದ ಲಿಯೊನಾರ್ಡ್ ಜಾನ್ ಹಂತ ಹಂತವಾಗಿ ತಮ್ಮ ಹೋರಾಟಕ್ಕೆ ಜಯ ಸಿಗುತ್ತಿದೆ ಎಂದರು.
ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕ್ಯಾಸಿಯಾ ಮಾರಾಟದ ವಿರುದ್ಧ ಕಳೆದ ಏಳು ವರ್ಷಗಳಿಂದ ತಾವು ಮಾಡಿದ ಹೋರಾಟಕ್ಕೆ ಇತ್ತೀಚೆಗೆ ಜಯ ದೊರೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರಕ್ಕೆ ಬರೆದ ಪತ್ರಕ್ಕೆ ಸ್ಪಂದಿಸಿದ ಅಧಿಕಾರಿಗಳು ಕ್ಯಾಸಿಯಾ ಆಮದನ್ನು ನಿಷೇಧಿಸಿದ್ದಾರೆ. ಈ ಕ್ರಮದಿಂದ ಮುಂಬೈ, ಗುಜರಾತ್, ಕಲ್ಕತ್ತಾ, ಮಂಗಳೂರು ಭಾಗದಲ್ಲಿ ಕ್ಯಾಸಿಯಾ ಆಮದು ಮತ್ತು ಮಾರಾಟದಲ್ಲಿ ನಿಯಂತ್ರಣವಾಗಿದೆ.
ನಕಲಿ ಚಕ್ಕೆ ಕ್ಯಾಸಿಯಾವನ್ನು ಅಡುಗೆಯಲ್ಲಿ ಬಳಸುವ ಮಸಾಲೆ ಪದಾರ್ಥ ಹಾಗೂ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತಿತ್ತು. ಚಕ್ಕೆ ಎಂದು ನಂಬಿಸಿ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕ್ಯಾಸಿಯಾವನ್ನು ಭಾರತಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಬಳಸುವುದರಿಂದ ಕ್ಯಾನ್ಸರ್, ಕಿಡ್ನಿ ಹಾಗೂ ಲಿವರ್ ವೈಫಲ್ಯ, ಮೆದುಳಿಗೆ ಹಾನಿ, ಇನ್ನಿತರ ಮಾರಣಾಂತಿಕ ಕಾಯಿಲೆಗಳು ಬರುವ ಬಗ್ಗೆ ಈಗಾಗಲೆ ಸಂಶೋಧನೆಗಳಿಂದ ಖಾತ್ರಿಯಾಗಿದೆ. ಆರೋಗ್ಯ ಅಧಿಕಾರಿಗಳು ಜನರ ಆರೋಗ್ಯದ ಕಾಪಾಡುವ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಲಿಯೊನಾರ್ಡ್ ಜಾನ್ ಹೇಳಿದರು.