ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆಯ ದಾಳಿಯಿಂದ ಸಾಕಾನೆ ಶಿಬಿರದ ಮರಿಯಾನೆ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಬಂಡೀಪುರ ಶಿಬಿರದ ಸಾಕಾನೆ ಲಕ್ಷ್ಮಿ ತನ್ನ 3 ತಿಂಗಳ ಗಂಡು ಮರಿಯೊಂದಿಗೆ ಕಳೆದ ನಾಲ್ಕು ದಿನದ ಹಿಂದೆ ಅರಣ್ಯಪ್ರದೇಶಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ. ಚಿರತೆಯನ್ನು ಹಿಮ್ಮೆಟ್ಟಿಸಿದ ಲಕ್ಷ್ಮಿ ಮರಿಯೊಂದಿಗೆ ಹಿಂತಿರುಗುವುದು ತಡವಾಗಿದೆ. ಇದನ್ನು ಹುಡುಕಿಕೊಂಡು ಹೋಗಿದ್ದ ಕಾವಾಡಿ ಮರಿಯನ್ನು ಸುರಕ್ಷಿತವಾಗಿ ಶಿಬಿರಕ್ಕೆ ಕರೆತಂದಿದ್ದು ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು ಚಿಕಿತ್ಸೆ ನೀಡಿದರು.
ಸದ್ಯ ಮರಿಯಾನೆ ಕುಂಟುತ್ತಾ ಓಡಾಡುತ್ತಿದ್ದು ಹೆಚ್ಚಿನ ದೂರ ನಡೆಯಲು ಸಾಧ್ಯವಾಗದ ಕಾರಣದಿಂದ ಲಕ್ಷ್ಮಿಯನ್ನು ಶಿಬಿರದಲ್ಲಿಯೇ ಇರಿಸಲಾಗಿದ್ದು, ಮೇವು ಹಾಗೂ ಆಹಾರವನ್ನು ನೀಡಲಾಗುತ್ತಿದೆ. ಮರಿಯಾನೆಗೆ ಆಗಿದ್ದ ಗಾಯವು ಗುಣಮುಖವಾಗುತ್ತಿದೆ ಎಂದು ಬಂಡೀಪುರ ವಲಯಾರಣ್ಯಾಧಿಕಾರಿ ಜೆ.ಗೋವಿಂದರಾಜು ಹೇಳಿದ್ದಾರೆ. ಕಳೆದ ವಾರವೂ ರಾಂಪುರ ಸಾಕಾನೆ ಶಿಬಿರದಲ್ಲಿ ಮರಿಯಾನೆಯ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ್ದನ್ನು ಸ್ಮರಿಸಬಹುದು