ಮಡಿಕೇರಿ: ಕೊಡಗಿನಲ್ಲೀಗ ಎಲ್ಲೆಂದರಲ್ಲಿ ಹೋಂಸ್ಟೇಗಳು ನಿರ್ಮಾಣವಾಗುತ್ತಿದ್ದು, ಇದೊಂದು ರೀತಿಯಲ್ಲಿ ಹಣ ಮಾಡುವ ದಂಧೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಕಡ್ಡಾಯ ನೋಂದಣಿ ಮಾಡಿಕೊಳ್ಳಲೇ ಬೇಕೆಂಬ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಬಹಳಷ್ಟು ಹೋಂಸ್ಟೇಗಳು ಕಾರ್ಯಾಚರಿಸುತ್ತಿವೆ.
ಒಂದು ಕಾಲದಲ್ಲಿ ಕಾಫಿ ದರ ಕುಸಿತದಿಂದ ಕಂಗಾಲಾಗಿದ್ದ ಕೆಲವು ಬೆಳೆಗಾರರು ಹೋಂಸ್ಟೇ ಆರಂಭಿಸಿದ್ದರು. ಅವತ್ತು ತಂತ್ರಜ್ಞಾನ ಅಷ್ಟೊಂದು ಮುಂದುವರೆದಿರಲಿಲ್ಲ. ಜತೆಗೆ ವೀಕೆಂಡ್ ಮಜಾ ಮಸ್ತಿ ಬಗ್ಗೆ ಜನ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಹೆಚ್ಚಿನವರು ಸಮಯ ಕಳೆಯಲು ಕಡಲ ಕಿನಾರೆಗಳಿಗೆ ತೆರಳುತ್ತಿದ್ದರು. ಯಾವಾಗ ಸುನಾಮಿ ಅಟಕಾಯಿಸಿ ಹಲವರನ್ನು ಬಲಿ ಪಡೆಯಿತೋ ಆಗಲೇ ಹೆಚ್ಚಿನವರು ಸುರಕ್ಷಿತ ಸ್ಥಳವಾದ ಕೊಡಗಿನತ್ತ ಬರತೊಡಗಿದರು. ಪ್ರವಾಸಿಗರು ಹೆಚ್ಚಾಗುತ್ತಿದ್ದಂತೆ ಹಣ ಮಾಡುವ ದಂಧೆಯಾಗಿ ಕೆಲವರು ಹೋಂಸ್ಟೇ ನಿರ್ಮಾಣಕ್ಕೆ ಮುಂದಾದರು. ಪರಿಣಾಮ ಕಳೆದೊಂದು ದಶಕಗಳಿಂದ ಕೊಡಗು ಜಿಲ್ಲೆಯಾದ್ಯಂತ ನಾಯಿಕೊಡೆಗಳಂತೆ ಹೋಂಸ್ಟೇಗಳು ಹುಟ್ಟಿಕೊಂಡಿದ್ದು, ಇವುಗಳ ನಿಯಂತ್ರಣಕ್ಕೆ ತಂದ ಕಾನೂನು ಕಾಯ್ದೆಗಳೆಲ್ಲವೂ ವಿಫಲವಾಗಿರುವುದು ಕಂಡು ಬರುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ ಕೇವಲ 561 ಹೋಂಸ್ಟೇಗಳು ನೋಂದಣಿಯಾಗಿದ್ದರೆ ಉಳಿದಂತೆ ಹಲವು ಅನಧಿಕೃವಾಗಿ ಕಾರ್ಯಾಚರಿಸುತ್ತಿವೆ. ಇತ್ತೀಚೆಗೆ ಹೋಂಸ್ಟೇಗಳಲ್ಲಿ ನಡೆಯುತ್ತಿರುವ ಅಕ್ರಮಗಳು ಬೆಳಕಿಗೆ ಬಂದ ನಂತರ ಅವುಗಳನ್ನು ಅಧಿಕೃತಗೊಳಿಸಲು ಅನುಕೂಲವಾಗುವಂತೆ ನೋಂದಣಿ ಕಾರ್ಯವನ್ನು ಮಾಡಲಾಯಿತಾದರೂ ಕೆಲವೇ ಕೆಲವರು ಮಾತ್ರ ನೋಂದಣಿ ಮಾಡಿಕೊಂಡಿದ್ದರೆ, ಇನ್ನು ಕೆಲವರು ಇದರ ಬಗ್ಗೆ ಇನ್ನೂ ಕೂಡ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ನ್ಯಾಯಯುತವಾಗಿ ಹೋಂಸ್ಟೇ ನಡೆಸುವ ಹಲವರು ಮೂಲತಃ ಕೊಡಗಿನವರೇ ಆಗಿದ್ದಾರೆ. ಇದರ ಮಧ್ಯೆ ಹೊರಗಿನಿಂದ ಬಂದು ಮನೆಗಳನ್ನು ಬಾಡಿಗೆ ಪಡೆದೋ?, ಖರೀದಿಸಿಯೋ ಹೋಂಸ್ಟೇ ನಡೆಸುವವರು ಇದ್ದಾರೆ ಇಂತಹವರು ಹಣಕ್ಕಾಗಿ ಅಕ್ರಮ ನಡೆಸಲು ತಯಾರಿದ್ದಾರೆ. ಹೀಗಾಗಿ ಹಲವು ಬಾರಿ ಹೋಂಸ್ಟೇಗಳ ಅಕ್ರಮ ಬಯಲಿಗೆ ಬಂದಿದೆ. ದೂರದ ಪಟ್ಟಣದಿಂದ ಬಂದು ಒಂದಷ್ಟು ದಿನ ಕಾಫಿ ತೋಟಗಳ ನಡುವೆ ಇದ್ದು ಹೋಗುವ ಮಂದಿಗೆ ರಿಲ್ಯಾಕ್ಸ್ ನೀಡುತ್ತಿದೆ. ಆದರೆ ಕೆಲವೆಡೆ ಹೋಂಸ್ಟೇಗಳನ್ನು ಅನೈತಿಕ, ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಮಾತ್ರ ಹೋಂಸ್ಟೇ ಉದ್ಯಮಕ್ಕೆ ಕಪ್ಪು ಚುಕ್ಕೆಯಾಗಿದೆ.
ಕೊಡಗಿನಲ್ಲಿ ಹೋಂಸ್ಟೇಗಳಾಗುತ್ತಿರುವುದಕ್ಕೆ ಹಲವರ ವಿರೋಧವಿದೆ. ಕೆಲವರು ಅಕ್ರಮ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ. ಹೋಂಸ್ಟೇಗಳಲ್ಲಿ ಸಾಕಷ್ಟು ಅಕ್ರಮಗಳಾಗುತ್ತಿವೆ, ಹೆಚ್ಚಿನ ದರ ವಸೂಲಿ ಮಾಡಿ ಸೂಕ್ತ ಸೌಲಭ್ಯವೂ ಒದಗಿಸುತ್ತಿಲ್ಲ ಎಂಬ ದೂರು ಇದೆ. ಇದೆಲ್ಲವನ್ನು ತಡೆಗಟ್ಟುವ ಸಲುವಾಗಿ ನೋಂದಣಿ ಮಾಡಿ ಪ್ರವಾಸೋದ್ಯಮ ಇಲಾಖೆಯ ಮೂಲಕ ನಿಯಂತ್ರಿಸಲು ಮುಂದಾಗಿದ್ದರೂ ಕೆಲವೇ ಕೆಲವು ಹೋಂಸ್ಟೇಗಳು ಮಾತ್ರ ನೋಂದಾಯಿಸಲ್ಪಟ್ಟಿರುವುದು ದುರಂತ ಇನ್ನು ಮುಂದೆಯಾದರೂ ಜಿಲ್ಲಾಡಳಿತ ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕಬೇಕಾಗಿದೆ.