ಚಿಕ್ಕಮಗಳೂರು: ಅದೊಂದು ಬಹುನಿರೀಕ್ಷಿತ ಏತ ನೀರಾವರಿ ಯೋಜನೆ. ಕಳೆದ 30 ವರ್ಷದ ಹಿಂದೆ ಆರಂಭವಾದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಅಲ್ಲಿಗೆ ಬರೋ ರಾಜಕಾರಣಿಗಳೆಲ್ಲಾ ಭರವಸೆ ನೀಡೊದ್ರಲ್ಲೇ ಬ್ಯುಸಿಯಾದ್ರೆ ಹೊರತು, ಜನರ ಸಮಸ್ಯೆ ಆಲಿಸೋ ಗೋಜಿಗೆ ಹೋಗಲಿಲ್ಲ. ರಾಜಕಾರಣಿಗಳಿಗೆ ಈ ಭಾಗದ ಮತಗಳ ಮೇಲಿದ್ದ ಪ್ರೀತಿ ಲಕ್ಷಾಂತರ ಜನರ ಬಾಯಾರಿಕೆ ನೀಗೋ ಕರಗಡ ಯೋಜನೆ ಮೇಲೆ ಇಲ್ಲವಾದದ್ದೇ ದುರಂತ.
ಇನ್ನು ಇಂದು ಕರಗಡ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಣೆ ಮಾಡಿದ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮೇ 15 ರ ಒಳಗೆ ಕಾಮಗಾರಿ ಪೂರ್ಣಗೊಳಿಸೋದಾಗಿ ರೈತರಿಗೆ ಭರವಸೆ ನೀಡಿದ್ದಾರೆ. ಇದು ಚಿಕ್ಕಮಗಳೂರು ತಾಲೂಕಿನ ಬಹುಬೇಡಿಕೆಯ ಕರಗಡ ಏತ ನೀರಾವರಿ ಯೋಜನೆ. 30 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರೋ ಈ ಯೋಜನೆ ಅಂತ್ಯ ಕಾಣೋದು ಈ ಭಾಗದ ರೈತರ ಆಸೆ. ಆದರೆ ರಾಜಕಾರಣಿಗಳು, ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ರೈತರ ಆಸೆಯಾಗೆ ಉಳಿದಿದೆ. ದಶಕಗಳಿಂದ್ಲೂ ಬರಗಾಲಕ್ಕೆ ತುತ್ತಾಗ್ತಿರೋದು ಕಡೂರು ಹಾಗೂ ಚಿಕ್ಕಮಗಳೂರಿನ 60 ರಿಂದ 70 ಹಳ್ಳಿಗಳಿಗೆ ಕುಡಿಯೋ ನೀರಿಗಾಗಿ ಈ ಯೋಜನೆ ಜೀವನಾಡಿ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕಾಮಗಾರಿ ವೀಕ್ಷಣೆ ಮಾಡಿ ಅಧಿಕಾರಿ ಹಾಗೂ ಕಂಟ್ರಾಕ್ಟರ್ ಗೆ ತರಾಟೆ ತೆಗೆದುಕೊಂಡರು. ಇನ್ನು ಕರಗಡ ಏತ ನೀರಾವರಿ ಯೋಜನೆಯನ್ನ ಮೇ 15 ರ ಒಳಗೆ ಕಾಮಗಾರಿ ಮುಗಿಸಲು ಕಂಟ್ರಾಕ್ಟರ್ ಗೆ ಸಚಿವರು ಗಡುವು ನೀಡಿದ್ದು, ಕಾಮಗಾರಿ ಪೂರ್ಣಗೊಂಡ ಮೇಲೆ ಕಾಮಗಾರಿ ಉದ್ಘಾಟನೆ ಮಾಡಲು ಸಿಎಂ ಸಿದ್ದಾರಾಮಯ್ಯರನ್ನ ಆಹ್ವಾನಿಸಲಾಗುತ್ತೆ ಎಂದರು.
ವ್ಯಯಕ್ತಿಕ ಕಾರಣಗಳಿಂದ ಕಾಂಟ್ರಾಕ್ಟರ್ ಕಾಮಗಾರಿಯನ್ನ ನಿಗದಿತ ಸಮಯಕ್ಕೆ ಮುಗಿಸಿಲ್ಲ, ಮೇ 15ರ ಒಳಗೆ ಕಾಮಗಾರಿ ಮುಗಿಸದಿದ್ದರೆ ಇಂಜಿನಿಯರ್ ಹಾಗು ಕಾಂಟ್ರಾಕ್ಟರ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತೆ ಎಂದು ಅಧಿಕಾರಿ ಹಾಗೂ ಕಂಟ್ರಾಕ್ಟರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕರಗಡದಿಂದ ದೇವಿಕೆರೆಗೆ ಹರಿದು ಬರೋ ನೀರು ಅಲ್ಲಲ್ಲಿ ವ್ಯರ್ಥವಾಗಿ ಬೇಲೂರಿನ ಡ್ಯಾಮ್ ಗೆ ಸೇರುತ್ತಿದೆ. ಹೀಗೆ ಹರಿದು ಹೋಗೋ 0.046 ಟಿಎಮ್ ಸಿ ನೀರನ್ನ ಕಡೂರು ಹಾಗೂ ಚಿಕ್ಕಮಗಳೂರಿನ ಬಯಲುಸೀಮೆಯ ಭಾಗಕ್ಕೆ ಹರಿಸುವ ಯೋಜನೆ ಕರಗಡ ಏತ ನೀರಾವರಿ ಯೋಜನೆ. ದೇವಿಕೆರೆಯಿಂದ ಬೆಳವಾಡಿಕೆರೆ, ಬೆಳವಾಡಿಯಿಂದ ದೇವನೂರು ಮೂಲಕ ಮಾರಿಕಣಿವೆಯನ್ನು ಸೇರೋ ಈ ನೀರು ಲಕ್ಷಾಂತರ ಜನರ, ಜಾನುವಾರುಗಳ ನೀರಿನ ದಾಹ ನೀಗಿಸುತ್ತದೆ. ಇವತ್ತಿನ ಉಸ್ತುವಾರಿ ಸಚಿವರ ಭೇಟಿಯಿಂದಾದ್ರು ಕಾಮಗಾರಿ ಪೂರ್ಣಗೊಳಿಸಿ ಆದಷ್ಟು ಬೇಗಾ ನೀರು ಹರಿಸಬೇಕೆಂದು ರೈತರ ಒತ್ತಾಯವಾಗಿದೆ.
ಒಟ್ಟಾರೆಯಾಗಿ 30 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರೋ ಈ ಯೋಜನೆ ಆದಷ್ಟುಬೇಗ ಪೂರ್ಣಗೊಂಡು ಸಾವಿರಾರು ರೈತರ ಹೊಟ್ಟೆ ತುಂಬಿಸಬೇಕಿದೆ. ಉಸ್ತುವಾರಿ ಸಚಿವರ ಗಡುವು ಮೇ 15 ಒಳಗೆ ಕಾಮಗಾರಿ ಪೂರ್ಣಗೊಳ್ಳುತ್ತಾ ಕಾದುನೋಡಬೇಕಿದೆ.