ಮಡಿಕೇರಿ: ಅಕ್ರಮ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಸಂಬಂಧಪಟ್ಟ ವಾಹನ ಮಾಲೀಕರ ಮೇಲೆ ಅಗತ್ಯ ಕ್ರಮಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕಂದಾಯಾಧಿಕಾರಿಗಳ ಸಭೆ ನಡೆಯಿತು.
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಗಣಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿನ ವಿವಿಧ ಭಾಗಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತುರ್ತಾಗಿ ಜಾಗ ಮಂಜೂರು ಮಾಡಿ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಬೇಕು. ಪಾಲಿಬೆಟ್ಟದಲ್ಲಿ ಹಾಸ್ಟಲ್ ನಿರ್ಮಾಣಕ್ಕೆ ತುರ್ತು ಕ್ರಮವಹಿಸಬೇಕು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರದ ಕಾರ್ಯಕ್ರಮಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಮಡಿಕೇರಿಯಲ್ಲಿ ಪೌರಕಾರ್ಮಿಕರಿಗೆ ಸೂಕ್ತ ವಸತಿ ಸೌಲಭ್ಯವನ್ನು ಒದಗಿಸಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಆದೇಶಿಸಿದರು. ಗ್ರಾ.ಪಂ. ಮಟ್ಟದಲ್ಲಿ ಅರ್ಹ ಫಲಾನುಭವಿಗಳಿಗೆ ಸೂಕ್ತ ಸ್ಥಳದಲ್ಲಿ ಮನೆ ನಿರ್ಮಿಸಲು ನಿವೇಶನ ಮಂಜೂರು ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಸಮಸ್ಯೆಗಳನ್ನು ಅಲ್ಲಿಯೇ ತುರ್ತಾಗಿ ಬಗೆಹರಿಸುವಂತಾಗಬೇಕು. ಅನಗತ್ಯ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡುವ ಸಮಯದಲ್ಲಿ ಎಸ್.ಸಿ. ಎಸ್.ಟಿ. ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕಂದಾಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಮಾತನಾಡಿ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಗಮನ ಸೆಳೆದರು. ಸಂಬಂಧಪಟ್ಟ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು ಗ್ರಾ.ಪಂ. ಮಟ್ಟದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದರು.
ಮಡಿಕೇರಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರು ಸಭೆಗೆ ವಿವರಣೆ ನೀಡಿ ಕರ್ಣಂಗೇರಿಯಲ್ಲಿ 40 ಕುಟುಂಬಗಳಿಗೆ ನಿವೇಶನ ನೀಡುವ ಪ್ರಕ್ರಿಯೆಯು ಚಾಲನೆಯಲ್ಲಿದೆ ಎಂದರು.
ಮುಂಗಾರಿನ ಸಮಯದಲ್ಲಿ ರೈತರಿಗೆ ಅನುಕೂಲವಾಗುವಂತೆ ಗೊಬ್ಬರ, ಬಿತ್ತನೆ ಬೀಜಗಳ ವಿತರಣೆಗೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹೇಳಿದರು. ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ವಿತರಿಸುವಂತೆ ಸೂಚಿಸಿದರು. ಕೆಲವೆಡೆ ರೈತ ಸಂಪರ್ಕ ಕೇಂದ್ರಕ್ಕೆ ಜಾಗದ ಅವಶ್ಯಕತೆ ಇದ್ದು ಸೂಕ್ತ ಜಾಗವನ್ನು ಗುರುತಿಸುವಂತೆ ಕಂದಾಯಾಧಿಕಾರಿಗಳಿಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಬಿ.ಆರ್.ಗಿರೀಶ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇ ಗೌಡ, ಸೋಮವಾರಪೇಟೆ, ವಿರಾಜಪೇಟೆ ಮತ್ತು ಮಡಿಕೇರಿ ತಾ. ತಹಶೀಲ್ದಾರರು, ಕಂದಾಯ ನಿರೀಕ್ಷಕರು, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.