ಗುಂಡ್ಲುಪೇಟೆ: ಪಟ್ಟಣದ ಪುರಸಭಾ ವ್ಯಾಪ್ತಿಯ 1ನೇ ವಾರ್ಡ್ ಹೆಚ್.ಎಸ್.ಮಹದೇವಪ್ರಸಾದ್ ನಗರದಲ್ಲಿ ಮೂಲ ಭೂತ ಸೌಲಭ್ಯಗಳ ಕೊರತೆ ಕುರಿತಂತೆ ದೂರುಗಳು ಬಂದ ಹಿನ್ನಲೆಯಲ್ಲಿ ಇದೀಗ ಪುರಸಭೆ ಎಚ್ಚೆತ್ತುಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗುವುದರೊಂದಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಿದೆ.
ಮಹದೇವಪ್ರಸಾದ್ ನಗರದಲ್ಲಿ ಮೂಲಭೂತ ಸೌಕರ್ಯ ಕೊರತೆ ಜತೆಗೆ ಅವ್ಯವಸ್ಥೆಯೂ ತಾಂಡವವಾಡುತ್ತಿತ್ತು. ಈ ಕುರಿತಂತೆ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಇದೀಗ ಪುರಸಭೆಯ ಪೌರಕಾರ್ಮಿಕರನ್ನು ವಾರ್ಡ್ ಗೆ ಕಳುಹಿಸಿ ವಾರ್ಡ್ ಸುತ್ತಮುತ್ತ ಇದ್ದ ಬೇಲಿ ಕತ್ತರಿಸಿ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಲ್ಲದೆ, ಚರಂಡಿ ಸುತ್ತಮುತ್ತ ಇದ್ದ ಕಸವನ್ನು ತೆರವು ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ಇದುವರೆಗೆ ಚರಂಡಿಯನ್ನು ಸ್ವಚ್ಛಗೊಳಿಸದ ಕಾರಣದಿಂದ ತ್ಯಾಜ್ಯಗಳು ಅಲ್ಲಿಯೇ ಕೊಳೆತು ದುರ್ನಾತ ಬೀರುತ್ತಿರುವುದರಿಂದ ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದಲ್ಲದೆ ಸೊಳ್ಳೆ ಕ್ರಿಮಿಕೀಟನಾಶಕಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಭಯ ಆರಂಭವಾಗಿತ್ತು. ವಾರ್ಡ್ ನಲ್ಲಿ ಕಸದ ಸಮಸ್ಯೆ ಉಂಟಾಗಲು ಕಾರಣ ಹೇಳುವುದಾದರೆ ಪುರಸಭಾ ವತಿಯಿಂದ ಯಾವುದೇ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿರಲಿಲ್ಲ. ಅಷ್ಟೇ ಅಲ್ಲ ಅಲ್ಲೊಂದು ಕಸದ ಡಬ್ಬವನ್ನು ಕೂಡ ವಾರ್ಡ್ನ ಪ್ರಮುಖ ಬೀದಿಗಳಲ್ಲಿ ಇಟ್ಟಿರಲಿಲ್ಲ. ಇದರಿಂದ ಸಾರ್ವಜನಿಕರು ರಸ್ತೆಬದಿಯನ್ನೇ ಅವಲಂಬಿಸಿ ಕಸವನ್ನು ಅಲ್ಲೇ ಹಾಕಿ ಹೋಗುತ್ತಿದ್ದರು. ಕಸಗಳು ಎಲ್ಲೆಂದರಲ್ಲಿ ಹರಡಿ ಚರಂಡಿಯಲ್ಲಿ ಬಿದ್ದಿದ್ದರಿಂದ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯದೆ ವಾತಾವರಣ ಕಲುಷಿತವಾಗಿತ್ತು.
ಈಗ ಪುರಸಭೆ ಈ ನಗರದತ್ತ ಗಮನಹರಿಸಿದ್ದು, ಇನ್ನು ಮುಂದೆಯಾದರೂ ಇಲ್ಲಿನ ನಿವಾಸಿಗಳು ನೆಮ್ಮದಿಯಾಗಿ ವಾಸಮಾಡಬಹುದೇನೋ.