ಮಡಿಕೇರಿ: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆ ಬಿರುಗಾಳಿಗೆ ಮನೆ ಕಟ್ಟಡಗಳ ಹೆಂಚು ಹಾರಿಹೋಗಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರೆ, ಅಲ್ಲಲ್ಲಿ ಮರಗಿಡಗಳು ಮುರಿದು ಬಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಷ್ಟ ಉಂಟಾದ ಘಟನೆ ನಡೆದಿದೆ.
ಮಳೆಯಿಂದಾಗಿ ಸುಂಟಿಕೊಪ್ಪ ಗ್ರಾ.ಪಂ. ಕಚೇರಿಯ ಮೇಲ್ಚಾವಣಿಯ ಸುಮಾರು 150 ಕ್ಕೂ ಹೆಚ್ಚು ಹೆಂಚುಗಳು ಗಾಳಿಗೆ ಹಾರಿ ಮಾರುಕಟ್ಟೆ ಆವರಣಕ್ಕೆ ಬಿದ್ದಿವೆ. ಕಚೇರಿ ಒಳಗೆ ನೀರು ಪ್ರವೇಶಿಸಿದೆ. ಇಲ್ಲಿನ ಜನತಾ ಕಾಲೋನಿಯ ವಿಶ್ವನಾಥ, ವಿಜಯ, ಚೆಲುವ ಹಾಗೂ ವಿನೋದ್ ಅವರ ಮನೆಗೆ ಭಾರೀ ಮಳೆಯ ಪರಿಣಾಮ ರಾಷ್ಟ್ರಿಯ ಹೆದ್ದಾರಿಯಲ್ಲಿ ಕಲುಷಿತ ಮಳೆಯ ನೀರು ಮೇಲ್ಭಾಗದಿಂದ ರಭಸವಾಗಿ ನೀರು ಹರಿದ ಪರಿಣಾಮ ಮನೆಗಳಿಗೆ ನುಗ್ಗಿದ್ದು ಆಹಾರ ಪದಾರ್ಥಗಳು ನೀರು ಪಾಲಾಗಿವೆ.
ಪ್ರತಿ ವರ್ಷ ಮಳೆಗಾಲದಲ್ಲಿ ಜನತಾ ಕಾಲೋನಿ ನಿವಾಸಿಗಳು ಆವೈಜ್ಞಾನಿಕವಾಗಿ ಪಂಚಾಯಿತಿಯವರು ಚರಂಡಿ ನಿರ್ಮಿಸಿದ್ದರಿಂದ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯಲು ಸಾಧ್ಯವಾಗದೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಈ ವಿಭಾಗದ ನಿವಾಸಿಗಳು ದೂರಿದ್ದಾರೆ. ಮಳೆ ಹಾಗೂ ಗಾಳಿಯ ಆರ್ಭಟದಿಂದ ಕತ್ತಲ ಕೂಪಕ್ಕೆ ಸುಂಟಿಕೊಪ್ಪದ ತೆರಳಿದ ಹಲವು ಗ್ರಾಮಗಳು. ಕೆಂಚಟ್ಟಿ, ಗುಂಡುಗುಟ್ಟಿ, ಕುಂಬೂರು, ಮತ್ತಿಕಾಡು, ಭೂತನಕಾಡು, ಸೇರಿದಂತೆ ಸುತ್ತ-ಮುತ್ತಲ್ಲ ಪ್ರದೇಶಗಳಲ್ಲಿ 40 ರಿಂದ 50 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ಸೆಸ್ಕ್ ಜೂನಿಯರ್ ಅಭಿಯಂತರರಾದ ರಮೇಶ್ ತಿಳಿಸಿದ್ದಾರೆ. ಮುಂಗಾರು ಮಳೆ ಆರಂಭದ ಮೊದಲೇ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಹಾನಿಗಳು ಸಂಭವಿಸುತ್ತಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.