ಚಾಮರಾಜನಗರ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಚಾಮರಾಜನಗರದಲ್ಲಿ ವ್ಯಕ್ತಿಯೊಬ್ಬನನ್ನು ಬಲಿತೆಗೆದುಕೊಂಡಿದೆ. ಚಾಮರಾಜನಗರದ ನ್ಯಾಯಾಲಯದ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂಜುಂಡಸ್ವಾಮಿರವರ ಪುತ್ರ ಸುದೀಪ್ ನೇಣಿಗೆ ಶರಣಾದ ದುರ್ದೈವಿ.
ಈತ ಐಪಿಎಲ್ ಕ್ರಿಕೆಟ್ ಆರಂಭವಾದಲ್ಲಿಂದ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಇದರಲ್ಲಿ ಲಕ್ಷಾಂತರ ರೂ. ಕಳೆದುಕೊಂಡಿದ್ದನು ಎನ್ನಲಾಗಿದೆ. ಆದರೂ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿ ಬಡ್ಡಿಗೆ ಸಾಲ ಪಡೆದು ತಂದು ಬೇರೆ ಬೇರೆ ಕಡೆ ಬೆಟ್ಟಿಂಗ್ನಲ್ಲಿ ಹಣ ತೊಡಗಿಸಿದ್ದನು. ಆದರೆ ಹಣ ಕಳೆದುಕೊಂಡಿದ್ದರಿಂದ ಲಕ್ಷಾಂತರ ರೂಪಾಯಿ ಸಾಲವಾಗಿ ಹೊರಗೆ ತಿರುಗಾಡದ ಸ್ಥಿತಿಗೆ ತಲುಪಿದ್ದನು.
ಈ ನಡುವೆ ಸಾಲಗಾರರು ಪೀಡಿಸತೊಡಗಿದ್ದರು. ಎಲ್ಲರಿಗೂ ಸಬೂಬು ಹೇಳುತ್ತಾ ತಪ್ಪಿಸಿಕೊಂಡು ತಿರುಗುತ್ತಿದ್ದ ಸುದೀಪ್ ಕಳೆದೊಂದು ವಾರದ ಹಿಂದೆ ಪತ್ನಿಯನ್ನು ತವರಿಗೆ ಕಳುಹಿಸಿ ಒಬ್ಬನೇ ಮನೆಯಲ್ಲಿದ್ದನು. ತವರಿಗೆ ತೆರಳಿದ್ದ ಪತ್ನಿ ಮನೆಗೆ ಬರುವ ವಿಚಾರ ತಿಳಿದ ಸುದೀಪ್ ಮನೆಯ ಕೋಣೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತವರಿಂದ ಬಂದ ಪತ್ನಿ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಗೋಚರಿಸಿದೆ. ತಕ್ಷಣ ಚೀರಿದ ಆಕೆ ಎದೆ ಬಡಿದುಕೊಂಡು ಅಳತೊಡಗಿದ್ದಾಳೆ. ಕೂಡಲೇ ಅಕ್ಕಪಕ್ಕದವರು ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದರಿಂದ ಸ್ಥಳಕ್ಕೆ ಪೊಲೀಸರು ತೆರಳಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸುದೀಪ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆರು ಪುಟಗಳ ಡೆತ್ ನೋಟ್ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.
ಸುದೀಪ್ ಗೆ ಸಂಬಂಧದಲ್ಲೇ ಮದ್ವೆಯಾಗಿ ಆರು ವರ್ಷವಾಗಿದ್ದು, ಪುಟ್ಟ ಮಗುವಿದೆ. ಸುದೀಪ್ ಸಂಬಂಧಿಕರು ಹೇಳುವಂತೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಚಾಮರಾಜನಗರ ಮತ್ತು ಬೆಂಗಳೂರಿನಲ್ಲಿ ಹಣ ತೊಡಗಿಸುತ್ತಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಆಗಿತ್ತು. ಸಾಲವಾಗಿ ಹಣ ಕೊಟ್ಟವರು ಮನೆಗೆ ಬಂದು ವಾಪಾಸ್ ಕೊಡುವಂತೆ ಒತ್ತಡ ಹೇರಿದ್ದರಲ್ಲದೆ, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ನೀಡಿದ್ದರು. ಇದರಿಂದ ಭಯಗೊಂಡಿದ್ದ ಮತ್ತು ಹಣ ತೀರಿಸಲಾಗದೆ ಆತ ನೇಣಿಗೆ ಶರಣಾಗಿರುವುದಾಗಿ ತಿಳಿಸಿದ್ದಾರೆ.