ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಗಾಳಿಸಹಿತ ಮಳೆ ಸುರಿದ ಪರಿಣಾಮ ಮರಬಿದ್ದು ಬೈಕೊಂದು ಜಖಂಗೊಂಡಿರುವ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗುಂಡ್ಲುಪೇಟೆಯ ಕೆಎಸ್ಆರ್ ಟಿಸಿ ಡಿಪೋ ಬಳಿ ಘಟನೆ ನಡೆದಿದ್ದು, ಮರ ಬಿದ್ದ ಪರಿಣಾಮ ಬೈಕ್ ಹೊರತುಪಡಿಸಿ ಇನ್ಯಾವುದೇ ತೊಂದರೆಯಾಗಿಲ್ಲ. ಆದರೆ ಬೈಕ್ ಜಖಂಗೊಂಡಿದ್ದರಿಂದ ಸಾವಿರಾರು ರೂ. ನಷ್ಟವಾಗಿರುವುದಾಗಿ ಮಾಲಿಕ ಪ್ರಕಾಶ್ ತಿಳಿಸಿದ್ದಾರೆ. ಕೆಎಸ್ಆರ್ ಟಿಸಿಯಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ಅವರು ತಮ್ಮ ಬೈಕನ್ನು ಡಿಪೋ ಆವರಣದ ಮರದ ನೆರಳಿನಲ್ಲಿ ನಿಲ್ಲಿಸಿದ್ದರು. ಕರ್ತವ್ಯಕ್ಕೆ ತೆರಳಿದ್ದರು. ಆದರೆ ಬುಧವಾರ ಸಂಜೆ ಗಾಳಿ ಸಹಿತ ಮಳೆ ಆರಂಭವಾಗಿದ್ದು, ಇದ್ದಕ್ಕಿದ್ದಂತೆ ಭಾರೀ ಗಾಳಿ ಬೀಸಿದ್ದರಿಂದ ಮರ ಬುಡಸಹಿತ ಕಿತ್ತು ಬಿದ್ದಿದೆ. ಪರಿಣಾಮ ಬೈಕ್ ಮರದಡಿಗೆ ಸಿಲುಕಿ ಜಖಂಗೊಂಡಿದೆ.
ಇದರಿಂದಾಗಿ ಮಾಲಿಕ ಪ್ರಕಾಶ್ ಗೆ ನಷ್ಟವಾಗಿದೆ. ಆದರೆ ಮರದ ಬಳಿ ಯಾರೂ ಇಲ್ಲದೆ ಇದ್ದ ಕಾರಣದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಾಮಾನ್ಯವಾಗಿ ಈ ಮರದ ಬಳಿ ಜನ ಇರುತ್ತಿದ್ದರಾದರೂ ಮಳೆ ಗಾಳಿ ಬಂದಿದ್ದರಿಂದ ಇತ್ತ ಯಾರೂ ಸುಳಿದಿರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಮುಂಗಾರು ಆರಂಭದ ಮಳೆಯಾದ್ದರಿಂದ ಗಾಳಿ, ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿಯುತ್ತಿರುವುದರಿಂದ ಅಲ್ಲಲ್ಲಿ ಅನಾಹುತಗಳು ಸಂಭವಿಸುತ್ತಿದ್ದು ಜನ ಎಚ್ಚರಿಕೆಯಿಂದ ಇರಬೇಕಾಗಿದೆ. ಈಗಾಗಲೇ ಅಲ್ಲಲ್ಲಿ ಪ್ರಾಣಹಾನಿ ಆಸ್ತಿ ಪಾಸ್ತಿಗೆ ಹಾನಿ ಸಂಭವಿಸಿರುವುದನ್ನು ಸ್ಮರಿಸಬಹುದಾಗಿದೆ.