ಮಂಡ್ಯ: ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮೂಂದುವರೆಯುತ್ತಲೇ ಸಾಗಿದ್ದು, ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿಕೆ ನೀಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.
ಬರದ ಹಿನ್ನಲೆಯಲ್ಲಿ ಸಾಲ ಮಾಡಿಕೊಂಡಿರುವ ರೈತರು ಮಾತ್ರ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ ಮಂಡ್ಯದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಾಲಿಗೆ ಮತ್ತೊಬ್ಬ ರೈತನ ಸೇರ್ಪಡೆಯಾಗಿದೆ. ಮದ್ದೂರು ತಾಲೂಕಿನ ಕೋಣಸಾಲೆ ಗ್ರಾಮದಲ್ಲಿ ಯುವ ರೈತ ಮೋಹನ್ (33) ಎಂಬಾತ ತನ್ನ ಜಮೀನಿನ ಬಳಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ಮೂರು ಎಕರೆ ಜಮೀನು ಹೊಂದಿದ್ದು, ಕಬ್ಬು, ಭತ್ತ ಬೆಳೆದಿದ್ದರು. ಆದರೆ ಮಳೆಯಿಲ್ಲದೆ ಬೆಳೆ ಒಣಗಿತ್ತು. ಆದರೆ ಕೃಷಿಗಾಗಿ ಗ್ರಾಮದ ವ್ಯವಸಾಯ ಸಹಕಾರ ಸಂಘದಲ್ಲಿ 42 ಸಾವಿರ, ಬೆಸಗರಹಳ್ಳಿ ವಿಜಯಬ್ಯಾಂಕ್ ನಲ್ಲಿ ಒಡವೆ ಅಡವಿಟ್ಟು 2.5 ಲಕ್ಷ, ಸ್ತ್ರೀಶಕ್ತಿ ಸ್ವಸಹಾಯ ಸಂಘದಲ್ಲಿ 1 ಲಕ್ಷ ಹಾಗೂ ಕೈ ಸಾಲವಾಗಿ 3 ಲಕ್ಷ ರೂ. ಮಾಡಿಕೊಂಡಿದ್ದು, ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಕೈ ಸಾಲ ಮಾಡಿಕೊಂಡಿದ್ದರಿಂದ ಸಾಲಗಾರರು ಪೀಡಿಸತೊಡಗಿದ್ದರು. ಇದರಿಂದ ಬೇಸತ್ತ ಮೋಹನ್ ತನ್ನ ಜಮೀನಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಒಬ್ಬಳು ಪುತ್ರಿ ಇದ್ದಾರೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.